ಚನ್ನಪಟ್ಟಣ: ರೇಷ್ಮೆ ಸಾಕಣೆಗೆ ಅನುದಾನ ಬಿಡುಗಡೆ ಮಾಡಲು ರೈತರೊಬ್ಬರಿಗೆ ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ರೇಷ್ಮೆ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರೇಷ್ಮೆ ಇಲಾಖೆಯ ಎಸ್ ಇಒ ಪರಮೇಶ್ ಹಾಗೂ ನಿರೀಕ್ಷಕ ಯೋಗೇಶ್ ಬಂಧಿತರು. ತಾಲೂಕಿನ ಸೋಗಾಲದೊಡ್ಡಿ ಗ್ರಾಮದ ಯಲ್ಲಪ್ಪ ಎಂಬುವರು ರೇಷ್ಮೆ ಇಲಾಖೆಯಲ್ಲಿ ರೇಷ್ಮೆ ಸಾಕಣೆಗೆ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಅನುದಾನ ನೀಡಲು ಇಲಾಖೆ ಅಧಿಕಾರಿಗಳಾದ ಪರಮೇಶ್ ಹಾಗೂ ಯೋಗೇಶ್ ಎಂಬುವವರು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೈತ ಯಲ್ಲಪ್ಪ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.
ಯಲ್ಲಪ್ಪ ಮುಂಗಡವಾಗಿ ಪರಮೇಶ್ ಅವರಿಗೆ ಐದು ಸಾವಿರ ರೂ.ನೀಡಿದ್ದರು. ಬಾಕಿ 15 ಸಾವಿರ ರೂ. ನೀಡಬೇಕಿತ್ತು. ಈ ವೇಳೆ ಲೋಕಾಯುಕ್ತ ಪೊಲೀಸರ ಪೂರ್ವ ನಿಯೋಜಿತವಾಗಿ ನಗರದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ಕೆಇಬಿ ಕಚೇರಿ ಮುಂಭಾಗ ಯಲ್ಲಪ್ಪನಿಂದ 15 ಸಾವಿರ ರೂ. ಪಡೆಯುವಾಗ ಪರಮೇಶ್‌ನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರೇಷ್ಮೆ ನಿರೀಕ್ಷಕ ಯೋಗೇಶ್ ಎಂಬಾತನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.