ರಸ್ತೆ ಸರ್ವೇ ನಡೆಸಿದ ಅಧಿಕಾರಿಗಳು

oppo_0
oppo_0
Published on

ಬೈಲಕುಪ್ಪೆ: ಸಾರ್ವಜನಿಕರ ದೂರಿನ ಮೇರೆಗೆ ರಸ್ತೆ ಜಾಗವನ್ನು ಕಂದಾಯ, ಸರ್ವೇ ಇಲಾಖೆ ಸಿಬ್ಬಂದಿ ಬುಧವಾರ ಸರ್ವೇ ಕಾರ್ಯ ನಡೆಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಗಾಲು ಗ್ರಾಮದ ಕೆಲ ನಿವಾಸಿಗಳು ಸ್ವಂತ ಜಮೀನಿನಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಜಮೀನಿನ ಬದುಗಳ ಮೇಲೆ ಓಡಾಡಿಕೊಂಡು ಜೀವನ ಕಳೆಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ಕೆಲವರು ಜಮೀನಿಗೆ ಅಡ್ಡಲಾಗಿ ಬೇಲಿ ನಿರ್ಮಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ದೊರೆಸ್ವಾಮಿ ಅವರು ಕೆಲ ತಿಂಗಳ ಹಿಂದೆ ತಹಸೀಲ್ದಾರ್‌ಗೆ ಈ ಸಂಬಂಧ ದೂರು ನೀಡಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಬಳಿಕ ತಹಸೀಲ್ದಾರ್‌ಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧನರಾಜ್, ಗ್ರಾಮದ ಮುಖಂಡರು ಮನವಿ ಮಾಡಿದ್ದರು. ಈ ಮೇರೆಗೆ ತಹಸೀಲ್ದಾರ್ ನಿಸರ್ಗಪ್ರಿಯ ಅವರ ಆದೇಶದ ಮೇರೆಗೆ ಕಂದಾಯ ಹಾಗೂ ತಾಲೂಕು ಭೂಮಾಪನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ವೇ ನಂ.30ರಲ್ಲಿ ರಸ್ತೆ ಜಾಗವನ್ನು ಗುರುತಿಸಿದರು. ನಂತರ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ 15 ಅಡಿ ರಸ್ತೆ ಬಿಡಿಸಿಕೊಟ್ಟರು.

ಹಾರನಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ಆನಂದ್, ತಾಲೂಕು ಭೂಮಾಪನ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ದುರ್ಗೇಶ್, ಬೆಣಗಾಲು ಗ್ರಾಮ ಪಂಚಾಯಿತಿ ಸದಸ್ಯ ಧನರಾಜ್, ಮಾಜಿ ಅಧ್ಯಕ್ಷ ಗಣೇಶ್, ಗ್ರಾಮಸ್ಥರಾದ ಮಹೇಶ್, ರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net