

ದೇವದುರ್ಗ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ ಶೇ.5 ಅನುದಾನದಲ್ಲಿ ಕ್ರಿಯಾಯೋಜನೆ ರೂಪಿಸಿ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷ ವೆಂಕೋಬ ನಾಯಕ ದೊಂಡಂಬಳಿ ಆರೋಪಿಸಿದರು.
ಇದನ್ನೂ ಓದಿ:ಅಂಗವಿಕಲರ ಕಲ್ಯಾಣಕ್ಕೆ ಹಣ ಮೀಸಲಿಡಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆ ರೂಪಿಸಿ ಶೇ.5 ಅನುದಾನ ಮೀಸಲಿಟ್ಟಿದೆ. ಆದರೆ, ಗ್ರಾಪಂ ಅಧಿಕಾರಿಗಳು ವಿಕಲಚೇತನರಿಗೆ ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ತಾಲೂಕಿನ ಇರಬಗೇರಾ ಗ್ರಾಪಂನಲ್ಲಿ ಅಂಗವಿಕಲರ ಅನುದಾನದಲ್ಲಿ ಹೊಲಿಗೆ ಯಂತ್ರ, ಸೈಕಲ್, ಜೆರಾಕ್ಸ್ ಯಂತ್ರ, ಸೋಲಾರ್ ಸಾಮಗ್ರಿ ವಿತರಣೆಗೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ಮೇಲಧಿಕಾರಿಗಳಿಗೆ ಮನವಿ ಮಾಡಿದರೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಲೋಕಪ್ಪ ಜಾದವ್, ಡಾಕೋಜಿ, ನಾಗರಾಜ, ವಿರೂಪಾಕ್ಷಿ, ರಂಗಪ್ಪ ಇರಬಗೇರಾ ಇತರರಿದ್ದರು.