

ಲಿಂಗಸುಗೂರು: ತಾಲೂಕು ಪಂಚಾಯಿತಿ 2024-25ನೇ ಸಾಲಿನ ಅನಿರ್ಬಂಧಿತ ಅನುದಾನದಲ್ಲಿ ಅಂಗವಿಕಲರ ಕಲ್ಯಾಣಕ್ಕೆ ಹಣ ಮೀಸಲಿಡಬೇಕೆಂದು ಒತ್ತಾಯಿಸಿ ರಾಜ್ಯ ಅಂಗವಿಕಲರ ಆರ್ಪಿಡಿ ಟಾಸ್ಕ್ಫೋರ್ಸ್ ಸಂಘ ಸೋಮವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿತು.
ಇದನ್ನೂ ಓದಿ: ಎಸ್ಸಿ,ಎಸ್ಟಿ ಅನುದಾನ ದುರ್ಬಳಕೆ ಖಂಡಿಸಿ ಪ್ರತಿಭಟನೆ
ತಾಪಂನಲ್ಲಿ ಅನುಮೋದನೆಗೊಂಡ 2024-25ನೇ ಸಾಲಿನ ಅನಿರ್ಬಂಧಿತ 1.62 ಕೋಟಿ ರೂ. ಕ್ರಿಯಾ ಯೋಜನೆಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಶೇ.5 ಅನುದಾನ ಮೀಸಲಿಡದೆ 2016ರ ವಿಕಲಚೇತನ ವ್ಯಕ್ತಿಗಳ ಹಕ್ಕು ಉಲ್ಲಂಘನೆ ಮಾಡಿದಂತಾಗಿದೆ.
2021-22ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ 4ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶೌಚಗೃಹ ಕಳಪೆಯಿಂದ ಕೂಡಿದೆ. 2023-24ನೇ ಸಾಲಿನ ತಾಪಂ ಅನಿರ್ಬಂಧಿತ ಅನುದಾನದಲ್ಲಿ 11,63,907ರೂ. ಮೀಸಲಿಟ್ಟಿದ್ದರೂ ಬಳಕೆ ಮಾಡಿಲ್ಲ. ತಾಲೂಕಿನ ಶೇ.90 ಗ್ರಾಪಂಗಳಲ್ಲಿ ವೈಜ್ಞಾನಿಕ ರ್ಯಾಂಪ್, ಶೌಚಗೃಹ, ವ್ಹೀಲ್ಚೇರ್ ಸೇರಿ ಸುಲಭ ಲಭ್ಯತೆಯ ವ್ಯವಸ್ಥೆ ಮಾಡಿಲ್ಲ.
ತಾಪಂ ಅಧಿಕಾರಿಗಳು ಅಂಗವಿಕಲರ ಅನುದಾನದಲ್ಲಿ ಮೂಲ ಸೌಕರ್ಯ ಒದಗಿಸದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ನಾಗರಾಜ ಅಸ್ಕಿಹಾಳ, ವೀರಭದ್ರಪ್ಪ ಗೆಜ್ಜಲಗಟ್ಟ, ಹುಸೇನಬಾಷಾ, ಅಮರೇಶ ಪಾಟೀಲ್, ಶಿವಕುಮಾರ, ವಿರೂಪಾಕ್ಷಯ್ಯ ಕಾಳಾಪುರ, ದೇವಪ್ಪ ಕಾಳಾಪುರ ಇದ್ದರು.