

ಚಾಮರಾಜನಗರ: ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ರಾಜ್ಯದ ಇತರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೇ, ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆಯಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಅನ್ಯ ಯೋಜನೆಗಳಿಗೆ ಉಪಯೋಗ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ 2023-24 ನೇ ಸಾಲಿನಿಂದಲೂ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣದಲ್ಲಿ ಸುಮಾರು 25,000 ಕೋಟಿ ರೂ, ಹಣವನ್ನು ಗ್ಯಾರಂಟಿ ಯೋಜನೆಗಳಿಗೂ ಹಾಗೂ 15,000 ಕೋಟಿ ರೂ, ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಮೂಲಕ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಅದಾಗ್ಯೂ ಸರ್ಕಾರದ ಮುಖ್ಯಮಂತ್ರಿ ಮತ್ತು ಹಲವಾರು ದಲಿತ ಸಚಿವರೇ ಈ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅತ್ಯಂತ ದುರಂತವಾಗಿದೆ. ಕಾಂಗ್ರೆಸ್ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು, ಪ್ರಸ್ತುತ ಸಂದರ್ಭದಲ್ಲಿ ದಲಿತರಿಗೆ ದ್ರೋಹ ಎಸಗುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಅಂತರವನ್ನು ಹೆಚ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು. ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯ 7ಸಿ ಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡಸ್ವಾಮಿ, ದೊರೆಸ್ವಾಮಿ, ತಾಲೂಕು ಸಂಚಾಲಕರಾದ ರಂಗಸ್ವಾಮಿ, ಅನಿಲ್ ಕುಮಾರ್ ಗೂಳಿಪುರ, ಮಂಜುನಾಥ್, ನಾರಾಯಣಸ್ವಾಮಿ, ಜನ ಹಿತಾಸಕ್ತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುರೇಶ್ ರಾಮಸಮುದ್ರ, ನಿಜ ಧ್ವನಿ ಗೋವಿಂದರಾಜು ಹಾಗೂ ಇತರರು ಭಾಗವಹಿಸಿದ್ದರು.