

ಹಾಸನ: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಆಯ್ಕೆಯಾಗಿರುವ ಲೇಖಕಿ, ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತ ಬುಧವಾರ ಅಧಿಕೃತ ಆಹ್ವಾನ ನೀಡಿತು.
ಹಾಸನ ನಗರದಲ್ಲಿರುವ ಮನೆಗೆ ಮೈಸೂರಿನಿಂದ ಆಗಮಿಸಿದ ದಸರಾ ಆಚರಣೆ ವಿಶೇಷಾಧಿಕಾರಿಯೂ ಆದ ಮೈಸೂರು ಜಿಲ್ಲಾಧಿಕಾರಿ ಡಾ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವರಾಜು, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ ರೂಪಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸಿಫ್ ಇತರ ಅಧಿಕಾರಿಗಳ ತಂಡ ಆಗಮಿಸಿ ಬಾನು ಮುಷ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಆನೆ ವಿಗ್ರಹ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ನಂತರ ದಸರಾ ಆಹ್ವಾನ ಪತ್ರಿಕೆ ನೀಡಿ, ಮೈಸೂರಿಗೆ ಆಗಮಿಸಿ ನಾಡಹಬ್ಬಕ್ಕೆ ಶುಭ ಚಾಲನೆ ನೀಡಬೇಕು ಎಂದು ಕೋರಿದರು.
ಕುಟುಂಬ ಸಮೇತರಾಗಿ ದಸರಾ ಹಬ್ಬಕ್ಕೆ ಬರಬೇಕೆಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಆಹ್ವಾನಿಸಿದರು. ಆಹ್ವಾನವನ್ನು ಬಾನು ಮುಷ್ತಾಕ್ ಅವರು ಸಂತೋಷದಿಂದ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಬಾನು ಮುಷ್ತಾಕ್ ಅವರ ಪತಿ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.
ಬಾನು ಮುಷ್ತಾಕ್ ಮಾತನಾಡಿ, ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದಾಗ ಆರಂಭದಲ್ಲೇ ನಾನು ಅತೀವ ಸಂತೋಷ ವ್ಯಕ್ತಪಡಿಸಿದ್ದೆ. ಈಗ ಜಿಲ್ಲಾಡಳಿತದ ಇಡೀ ತಂಡ ಆಗಮಿಸಿ ನನಗೆ ಅಧಿಕೃತ ಆಹ್ವಾನ ನೀಡಿ ಸ್ವಾಗತ ನೀಡಿರುವುದು ಖುಷಿ ಹೆಚ್ಚು ಮಾಡಿದೆ ಎಂದು ಹರ್ಷಿಸಿದರು. ಇದಕ್ಕಾಗಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಸಮಸ್ತ ಜನತೆಗೆ, ಮೈಸೂರು ಜಿಲ್ಲಾಡಳಿತಕ್ಕೆ ಅನಂತ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ದಸರಾ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಲು ಬಂದಿದ್ದ ಅಧಿಕಾರಿಗಳಿಗೆ ತಮಗೆ ಬುಕರ್ ಪ್ರಶಸ್ತಿ ತಂದುಕೊಟ್ಟ ಎದೆಯ ಹಣತೆ ಪುಸ್ತಕಕ್ಕೆ ಶುಭ ನುಡಿ ಬರೆದು ಬಾನು ಮುಷ್ತಾಕ್ ನೀಡಿದರು.