ಮದುವೆಗೆ ನುಗ್ಗಿದ ಅಧಿಕಾರಿಗಳು !

22KWR5
Published on

ಕಾರವಾರ: ಕೋವಿಡ್ ನಿಯಮಾವಳಿ ಮೀರಿದ್ದಾರೆ ಎಂದು ಗುರುವಾರ ನಗರದಲ್ಲಿ ಆಯೋಜಿದ್ದ ಮದುವೆ ಸಮಾರಂಭಕ್ಕೆ ನುಗ್ಗಿದ ಅಧಿಕಾರಿಗಳು ಜನರನ್ನು ಚದುರಿಸಿದ್ದಾರೆ.
ಶೇಜವಾಡದ ಸದಾನಂದ ಹಾಲ್​ನಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನ ಸೇರಿಸಲಾಗಿದೆ ಎಂದು ಮಾಹಿತಿ ಪಡೆದ ಸೆಕ್ಟರ್ ಅಧಿಕಾರಿ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಸಮಾರಂಭಕ್ಕೆ ತೆರಳಿದ್ದರು. ಸೇರಿದ್ದ ಜನರನ್ನು ಹೊರ ಹೋಗುವಂತೆ ಸೂಚಿಸಿದರು. ಅಲ್ಲದೆ, ಕಲ್ಯಾಣ ಮಂಟಪದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗಲಿಬಿಲಿ: ಅಧಿಕಾರಿಗಳು ಬಂದಿದ್ದನ್ನು ಗಮನಿಸಿದ ಜನರು ಗಲಿಬಿಲಿಗೊಂಡು ತಂದಿದ್ದ ಉಡುಗೊರೆಯನ್ನೂ ವಧು- ವರರಿಗೆ ನೀಡದೆ, ಊಟವನ್ನೂ ಮಾಡದೇ ಹೋದರು. ಈ ಬಗ್ಗೆ ಮಾತನಾಡಿದ ಸಂಬಂಧಿಕ ನಗರಸಭೆ ಸದಸ್ಯ ಪ್ರದೀಪ ಗುನಗಿ, ಕೋವಿಡ್ ನಿಬಂಧನೆ ಜಾರಿಗೂ ಮುಂಚೆಯೇ ಮದುವೆ ಸಿದ್ಧತೆಯಾಗಿತ್ತು. ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳು ಏಕಾಏಕಿ ಬಂದಿದ್ದರಿಂದ ಗೊಂದಲ ಉಂಟಾಯಿತು. ಈ ಪರಿಸ್ಥಿತಿಯಿಂದ ಬೇಸರವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net