

ಮಾಗಡಿ: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಮಕ್ಕಳ ಮನೆಗಳಿಗೆ ತಾಲೂಕುಮಟ್ಟದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ಆರೋಗ್ಯ ವಿಚಾರಿಸಿದರಲ್ಲದೇ, ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಲು ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ವೀರೇಗೌಡನ ದೊಡ್ಡಿ ಹಾಗೂ ದಲಿತ ಕಾಲನಿಯ 10ಕ್ಕೂ ಹೆಚ್ಚು ಮಕ್ಕಳು ಕಲುಷಿತ ನೀರು ಕುಡಿದು ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಬಗ್ಗೆ "ವಿಜಯವಾಣಿ'ಯಲ್ಲಿ ಆ.26ರಂದು " ಕಲುಷಿತ ನೀರು ಸೇವಿಸಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ' ವರದಿ ಪ್ರಕಟಗೊಂಡ ಬೆನ್ನಲ್ಲೆ ಎಚ್ಚೆತ್ತ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಿರಣ್ಶಂಕರ್, ಟಿಎಚ್ಒ ಡಾ.ರಾಮಚಂದ್ರು, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ಶ್ರೀನಿವಾಸ್, ವೀರೇಗೌಡನ ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶ್ಮಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ಸಲಹೆ ನೀಡಿದರಲ್ಲದೇ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ತಾಲೂಕು ಆಸ್ಪತ್ರೆಗೆ ಡಾ.ಕಿರಣ್ ಶಂಕರ್ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಆರೋಗ್ಯವಾಗಿದ್ದಾರೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮುರುಳಿ ಮನೋಹರ್ ತಿಳಿಸಿದ್ದಾರೆ.
ಸದ್ಯಕ್ಕೆ ಓವರ್ ಹೆಡ್ ಟ್ಯಾಂಕ್ಗೆ ಹೋಗುತ್ತಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ನೇರವಾಗಿ ಕೊಳವೆ ಬಾವಿಯಿಂದ ಪೈಪ್ಗಳ ಮೂಲಕ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದು, ಓವರ್ ಹೆಡ್ ಟ್ಯಾಂಕ್, ಕೊಳವೆ ಬಾವಿಯ ನೀರು, ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಮನೆಗಳ ಬಳಿಯ ನಲ್ಲಿಯ ನೀರು ಹಾಗೂ ಶಾಲೆಗೆ ಸಂಪರ್ಕಿಸಿರುವ ನೀರಿನ ಮಾದರಿ ಕೊಂಡೊಯ್ಯಲಾಗಿದೆ. ಹಂಚಿಕುಪ್ಪೆ ಗ್ರಾಪಂ ಅಧ್ಯಕ್ಷೆ ಶಿಲ್ಪಾ ಮಲ್ಲಣ್ಣ, ಪಿಡಿಒ ಬಿ.ಕೆ.ಆಂಜನ್ ಕುಮಾರ, ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಮೋಹನ್ ಕುಮಾರು, ಗ್ರಾಪಂ ಸದಸ್ಯರಾದ ಜಯಣ್ಣ, ಷಹಜಾನ್ ಬಾನ್, ಪುಷ್ಪಾ, ಮುಖಂಡರಾದ ಗೋಪಿ, ದೊಡ್ಡಿ ಲಕ್ಷಮಣ್, ಗ್ರಾಪಂ ಸಿಬ್ಬಂದಿ ನಂಜುಂಡಯ್ಯ, ಪ್ರವಿಣ್ ಕುಮಾರು, ರೇಣುಕ ಪ್ರಸಾದ್, ವನಿತಾ ರೋಟ್ರಗಿಸ್, ಶಶಿಧರ್, ಆರೋಗ್ಯ ಇಲಾಖೆ ಶಿವಸ್ವಾಮಿ ಇದ್ದರು.
ಸಾಮಾನ್ಯವಾಗಿ ಕುಡಿಯವ ನೀರು ಹಾಗೂ ಆಹಾರ ಸೇವನೆಯಿಂದ ಮೇಲ್ನೋಟಕ್ಕೆ ಸಮಸ್ಯೆ ಕಂಡುಬಂದಿದೆ. ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. > ಡಾ.ರಾಮುಚಂದ್ರು ತಾಲೂಕು ಆರೋಗ್ಯಾಧಿಕಾರಿ ಗ್ರಾಮದ ಕೊಳವೆ ಬಾವಿಯ ನೀರು, ಓವರ್ ಹೆಡ್ ಟ್ಯಾಂಕ್ನಲ್ಲಿನ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಾತ್ಕಾಲಿಕವಾಗಿ ಕೊಳವೆಬಾವಿಯಿಂದ ನೇರವಾಗಿ ಮನೆಗಳಿಗೆ ನೀರು ಕಲ್ಪಿಸಲಾಗಿದೆ. ಗ್ರಾಮದ ಶುದ್ಧಕುಡಿಯುವ ನೀರಿನ ಘಟಕಕ್ಕೆ ಕಾರ್ಡ್ ಅಳವಡಿಸಲಾಗಿದ್ದು, ನಾಣ್ಯ ಹಾಕಿ ನೀರು ಪಡೆಯಲು ಅವಕಾಶ ಕಲ್ಪಿಸಲಾಗುವುದು. > ಆಂಜನ್ ಕುಮಾರ ಪಿಡಿಒ ಹಂಚಿಕುಪ್ಪೆ ಗ್ರಾಪಂ