ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ

04BTP01
Published on

ಬೆಟ್ಟದಪುರ: ತಾಲೂಕಿನ ಜನರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ, ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಮುಂದಾಗಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬೆಟ್ಟದಪುರ ಸಮೀಪದ ಹಸುವಿನಕಾವಲು ಗ್ರಾಮದಲ್ಲಿ ಬುಧವಾರ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರು ತಮ್ಮ ಬಳಿ ಸಮಸ್ಯೆಗಳನ್ನು ಹೊತ್ತು ತಂದಾಗ ಅವುಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಅದನ್ನು ಬಿಟ್ಟು, ಜನರನ್ನು ಸುಮ್ಮನೆ ಕಚೇರಿಗೆ ಅಲೆದಾಡುವಂತೆ ಮಾಡಬಾರದು. ಸ್ಥಳೀಯ ನಿವಾಸಿಗಳಿಗೆ, ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ಹಿತದೃಷ್ಟಿಯಿಂದ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಗ್ರಾಮೀಣ ಭಾಗದ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದರು.


ಗ್ರಾಮದ ಸಮಸ್ಯೆಗಳು ಸೇರಿದಂತೆ ಜನರಿಂದ ಅಹವಾಲು ಸ್ವೀಕರಿಸಿದರು. ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ತಹಸೀಲ್ದಾರ್ ನಿಸರ್ಗ ಪ್ರಿಯ, ತಾಪಂ ಇಒ ಸುನೀಲ್ ಕುಮಾರ್, ಹಾರಂಗಿ ಇಲಾಖೆಯ ಎಇಇ ಗೋಕುಲ್, ಎಇ ಶಿವುಕುಮಾರ್, ಬಿಇಒ ರವಿಪ್ರಸನ್ನ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಹಿತೇಂದ್ರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಗ್ರಾಮದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net