

ಚಿಂತಾಮಣಿ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ರಸ್ತೆ ಕಾಮಗಾರಿ ಭೂಮಿಪೂಜೆ, ಚೆಕ್‌ಡ್ಯಾಂ ಸೇರಿ ಹಲವು ಕಾಮಗಾರಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರುಹಾಜರಿ ಮತ್ತು ಶುದ್ಧ ನೀರಿನ ಘಟಕದ ಕಳಪೆ ಕಾಮಗಾರಿ ಬಗ್ಗೆ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆಕ್ರೋಶಗೊಂಡರು.
ತಾಲೂಕಿನ ಶೆಟ್ಟಿಹಳ್ಳಿಯಲ್ಲಿ 6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಕಳಪೆ ಕಾಮಗಾರಿ ಕಂಡು ನೀರು ಸರಬರಾಜು ಇಲಾಖೆ ಅಧಿಕಾರಿ ಲೋಕೇಶ್ ಮತ್ತು ಗುತ್ತಿಗೆದಾರ ನಂದೀಶ್ ಅವರನ್ನು ತೀವ್ರವಾಗಿ ಸಚಿವರು ತರಾಟೆಗೆ ತೆಗೆದುಕೊಂಡರು.
ಮುರುಗಮಲ್ಲೆ ಗ್ರಾಮದ ಪೆದ್ದೂರು ಅನ್ನೇನಹಳ್ಳಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಗೆ ಬಂದ ಸಚಿವರು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಕಾಣಲಿಲ್ಲ. ತಾಪಂ ಇಒ ಎಸ್.ಆನಂದ್ ಮತ್ತು ಪಿಡಿಒ ಬಿಟ್ಟರೇ ಇತರ ಅಧಿಕಾರಿಗಳು ಗೈರಾಗಿರುವುದನ್ನು ಕಂಡು ಸಚಿವರು ಆಕ್ರೋಶಗೊಂಡರು. ಗೈರಾದ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು. ಎಲ್ಲ ಸಮಸ್ಯೆಗಳ ಬಗ್ಗೆ ಜನ ನನ್ನನ್ನು ಪ್ರಶ್ನಿಸುತ್ತಾರೆ. ಉತ್ತರ ಕೊಡಬೇಕಾದ ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಕ್ಷೇತ್ರಕ್ಕೆ ಬಂದರೆ ತಾಲೂಕಿನ ಎಲ್ಲ ಅಧಿಕಾರಿಗಳು ಇರಬೇಕು ಎಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ 60 ಲಕ್ಷ ರೂ. ವೆಚ್ಚದಲ್ಲಿ ಮುದ್ದಲಹಳ್ಳಿ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ ಸಚಿವ ಡಾ.ಎಂ.ಸಿ. ಸುಧಾಕರ್, ಫೆ.18ರಂದು ಮುಖ್ಯಮಂತ್ರಿಗಳ 5 ಕೋಟಿ ರೂ. ಅನುದಾನದ ಕಾಮಗಾರಿ, ಸಿಆರ್‌ಎಫ್ ಯೋಜನೆಯಡಿಯಲ್ಲಿ 6 ಕೋಟಿ ರೂ. ವೆಚ್ಚದ ಕಾಮಗಾರಿ, ಮೈಲಾಂಡ್ಲಹಳ್ಳಿಯಲ್ಲಿ ಸೇರಿ ಹಲವು ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪೆದ್ದೂರು ಗ್ರಾಪಂ ಅಧ್ಯಕ್ಷ ಯರ‌್ರಪ್ಪರೆಡ್ಡಿ, ಮುರುಗಮುಲ್ಲ ಗ್ರಾಪಂ ಅಧ್ಯಕ್ಷ ಹಾಜಿ ಅನ್ಸರ್ ಖಾನ್, ಮಾಜಿ ಎಪಿಎಂಸಿ ಅಧ್ಯಕ್ಷ ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಮುರಗಮಲ್ಲಾ ಲಕ್ಷ್ಮೀನಾರಾಯಣ ರೆಡ್ಡಿ, ಪೆದ್ದೂರು ರಮೇಶ್, ರಮೇಶ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಸುರೇಶ್, ಮುಖಂಡರಾದ ಅಮೀರ್ ಜಾನ್, ಮೌಲಾಜಿ ರಾವ್, ಶಿವಾಜಿರಾವ್ ಸೇರಿ ಮುಖಂಡರು ಇದ್ದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ
2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ 25 ಕೋಟಿ ರೂ. ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ. ಇದರಲ್ಲಿ ಮುರಗಮಲ್ಲಾ ಹೋಬಳಿಗೆ 5 ಕೋಟಿ ರೂ. ಮೀಸಲಾಗಿದೆ. ಹಲವು ವರ್ಷಗಳಿಂದ ಹದೆಗೆಟ್ಟಿದ್ದ ರಸ್ತೆಗಳಾದ ಮುರುಗಮಲ್ಲ ಹೋಬಳಿ ಶ್ರೀನಿವಾಸಪುರ ಗಡಿಯಿಂದ ನೀಲಪಲ್ಲಿ-ದಿಗುವಕೋಟೆ ಮೂಲಕ ಯಗವಕೋಟ ರಸ್ತೆಯನ್ನು3.53 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ನಂದಿಗಾನಹಳ್ಳಿ ಪಂಚಾಯಿತಿಯ ಪೆದ್ದೂರು ರಸ್ತೆಯಿಂದ ಅನ್ನೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಆದರೆ, ಇದುವರೆಗೂ ಸಣ್ಣ ಗ್ರಾಮದ ರಸ್ತೆಯೂ ಡಾಂಬರೀಕರಣವಾಗಿಲ್ಲ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಶುದ್ಧ ನೀರಿನ ಘಟಕಕ್ಕೆ ಚಾಲನೆ
ಹಲವು ಗ್ರಾಮಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಯಡಿ ಶುದ್ಧ ಕುಡಿಯವ ನೀರಿನ ಘಟಕ ನಿರ್ಮಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಜಿಲ್ಲಾ ಮೈನಿಂಗ್ ಫಂಡ್‌ನಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ 13 ಗ್ರಾಮಗಳಿಗೆ ಮಂಜೂರಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಲಾಯಿತು.