ಲಂಚ ಪಡೆದ ಅಧಿಕಾರಿ ಸಸ್ಪೆಂಡ್ ಮಾಡಿ: ಆಹಾರ ಇಲಾಖೆಗೆ ಸಂಘ ಒತ್ತಾಯ

bribe
Published on

ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಆಹಾರ ಶಿರಸ್ತೇದಾರ ಕೃಷ್ಣಮೂರ್ತಿ ಎಂಬಾತ ನ್ಯಾಯಬೆಲೆ ಅಂಗಡಿ ವರ್ತಕರಿಂದ ಲಂಚ ಪಡೆದಿರುವ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದ್ದರೂ ಆಹಾರ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಪಾವಗಡ ತಾಲೂಕಿನ ಕಸಬಾ ಹೋಬಳಿಯ ಬ್ಯಾಡನೂರು ಪ್ರಾಥಮಿಕ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಿಂದ ಹಲವು ವರ್ಷಗಳಿಂದ ಪಡಿತರದಾರರಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಸಾರ್ವಜನಿಕರಿಂದ ಯಾವುದೇ ದೂರು ಇಲ್ಲದಿದ್ದರೂ ಮಾಮೂಲಿ ಕೊಡಲಿಲ್ಲವೆಂದು ನೆಪ ಮಾಡಿಕೊಂಡು ಅಂಗಡಿ ಲೈಸೆನ್ಸ್‌ನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಮಾನತು ಆದೇಶ ವಾಪಸ್ ಪಡೆಯುವಂತೆ ಕೇಳಿದರೆ 50 ಸಾವಿರ ರೂ.ಲಂಚ ನೀಡುವಂತೆ ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು. ಲಂಚ ಪಡೆದಿರುವ ಬಗ್ಗೆ ದೂರು ನೀಡಿದ್ದರೂ ಐದು ತಿಂಗಳಿಂದ ಇಲಾಖೆ ಕುಂಟುನೆಪ ಹೇಳಿಕೊಂಡು ಬರುತ್ತಿದೆ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ತವ್ಯ ಲೋಪದಡಿ ಈತನನ್ನು ಸಸ್ಪೆಂಡ್ ಮಾಡಬೇಕಿರುವುದು ಇಲಾಖೆಯ ಜವಾಬ್ದಾರಿ. ಲಂಚ ಪಡೆದಿರುವ ಬಗ್ಗೆ ಸಾಕಷ್ಟು ಸಾಕ್ಷಿ ಇದ್ದರೂ ಏನು ಕ್ರಮಕೈಗೊಳ್ಳುತ್ತಿಲ್ಲ. ರಾಜ್ಯ ಇತರ ಕಡೆಗಳಲ್ಲಿ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಲಂಚ ನೀಡುವಂತೆ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳ ಕಿರುಕುಳದಿಂದ ನಾವು ರೋಸಿ ಹೋಗುವಂತಾಗಿದೆ. ಹೀಗಾಗಿ, ಲಂಚ ಪಡೆದ ಆಹಾರ ಶಿರಸ್ತೇದಾರನನ್ನು ಕೂಡಲೇ ಸಸ್ಪೆಂಡ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಕೆ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net