ಬಾಳುಗೋಡು ಕೊಡವ ಸಮಾಜ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

19 vpt 1.1
Published on

ವಿರಾಜಪೇಟೆ: ವಿರಾಜಪೇಟೆಯ ಬಾಳುಗೋಡಿನಲ್ಲಿರುವ ಕೊಡವ ಸಮಾಜಕ್ಕೆ ಭಾನುವಾರ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ ನೀಡಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ನಾನು ಶಾಸಕನಾಗಿ ಆಯ್ಕೆಯಾದ ಕೂಡಲೇ ಕೊಡವ ಸಮಾಜದ ಪದಾಧಿಕಾರಿಗಳು ಇಲ್ಲಿಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಹಾಗಾಗಿ ಸಿಎಂ ಜತೆ ಚರ್ಚಿಸಿ, ಕಾಂಗ್ರೆಸ್ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ಅನುದಾನದಲ್ಲಿ ಬಾಳುಗೋಡು ಕೊಡವ ಸಮಾಜದ ವಿವಿಧ ಅಭಿವೃದ್ಧಿ ಹಾಗೂ ನಿರ್ಮಾಣ ಕಾಮಗಾರಿಗಳಿಗೆ 6 ಕೋಟಿ ರೂ. ಒದಗಿಸಲಾಗಿತ್ತು. ಇದರಲ್ಲಿ ಮೈದಾನಗಳ ಅಭಿವೃದ್ಧಿ, ಪ್ರೇಕ್ಷಕರ ಗ್ಯಾಲರಿ, ತಡೆಗೋಡೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಒಳಗೊಂಡಿತ್ತು. ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಗುಣಮಟ್ಟದಿಂದ ಮಾಡಲಾಗುತ್ತಿದೆ ಎಂದರು.

ಕೊಡವ ಸಮಾಜದ ಪದಾಧಿಕಾರಿಗಳ ಮೇಲುಸ್ತುವಾರಿಯಲ್ಲಿ, ಸರ್ಕಾರ ನೀಡಿದ ಅನುದಾನದ ಸಂಪೂರ್ಣ ಸದ್ಬಳಕೆ ಆಗುತ್ತಿರುವುದನ್ನು ಮನಗಂಡು ಸಂತೋಷ ವ್ಯಕ್ತಪಡಿಸಿದ ಶಾಸಕರು, ಕ್ಷೇತ್ರದ ಎಲ್ಲರೂ ಈ ಕಾಮಗಾರಿಯಂತೆ ಎಲ್ಲ ಕಾಮಗಾರಿಗಳಲ್ಲೂ ಸರ್ಕಾರದ ಅನುದಾನ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಇಲ್ಲಿಯ ಹಾಕಿ ಮೈದಾನ ಅತ್ಯಂತ ಗುಣಮಟ್ಟದಲ್ಲಿದ್ದು, ಕೊಡಗಿನ ಕ್ರೀಡಾಪಟುಗಳ ಭವಿಷ್ಯಕ್ಕೆ ಇದು ಉತ್ತಮ ಕೊಡುಗೆಯಾಗಲಿದೆ ಎಂದು ಬಣ್ಣಿಸಿದರು.

ಬಾಳುಗೋಡು ಕೊಡವ ಸಮಾಜ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೋರಿಕೆಯಂತೆ, ಸದ್ರಿ ಕಾಮಗಾರಿಗಳ ಉದ್ಘಾಟನೆ ಶೀಘ್ರ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೊಡುವ ಸಮಾಜದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಮಾತನಾಡಿ, ಶಾಸಕ ಎ.ಎಸ್ ಪೊನ್ನಣ್ಣ ತಮ್ಮನ್ನು ಹಾಗೂ ಸಮಾಜದ ಪದಾಧಿಕಾರಿಗಳನ್ನು ಮುಖ್ಯಮಂತ್ರಿ ಬಳಿಗೆ ಕರೆದುಕೊಂಡು ಹೋಗಿ 10 ರೂ.ಕೋಟಿ ಅನುದಾನ ಒದಗಿಸಿದ್ದನ್ನು ಸ್ಮರಿಸಿಕೊಂಡರು. 10 ಕೋಟಿ ರೂ. ಅನುದಾನದಲ್ಲಿ, 6 ಕೋಟಿ ರೂ. ಬಾಳಗೋಡು ಕೊಡುವ ಸಮಾಜದ ಅಭಿವೃದ್ಧಿಗೆ 3 ಕೋಟಿ ರೂ.ಅನ್ನು 30 ಕೊಡವ ಸಮಾಜಗಳಿಗೆ ತಲಾ 10 ಲಕ್ಷ ರೂ.ನಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 1 ಕೋಟಿ ರೂ. ಭಾಗಮಂಡಲ ಕೊಡವ ಸಮಾಜಕ್ಕೆ ಮೀಸಲಿರಿಸಲಾಗಿದೆ ಎಂದು ಹೇಳಿದರು. ಈ ಅನುದಾನಗಳಲ್ಲಿ ಭಾಗಮಂಡಲ ಕೊಡವ ಸಮಾಜದ ಕಾಮಗಾರಿ ಕೆಲವು ತಾಂತ್ರಿಕ ಕಾರಣಗಳಿಂದ ನಿಧಾನಗೊಂಡಿದ್ದು ಈಗ ಅದನ್ನೆಲ್ಲ ಪರಿಹರಿಸಿ ಕೂಡಲೇ ಆ ಕಾಮಗಾರಿ ಪೂರ್ಣಗೊಳ್ಳುವುದು ಎಂದು ಹೇಳಿದರು.

ನವೆಂಬರ್ 6ರಿಂದ 9 ರ ತನಕ ಕೊಡವ ಹಾಕಿ ನಮ್ಮೆ ಈ ಮೈದಾನದಲ್ಲಿ ನಡೆಯಲಿದ್ದು ಇದರ ಸಮಾರೋಪಕ್ಕೆ ಮುಖ್ಯಮಂತ್ರಿಯನ್ನು ಕರೆಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದು, ಮುಖ್ಯಮಂತ್ರಿ ಆಗಮಿಸಿದ್ದಲ್ಲಿ ಅದೇ ದಿನ ಎಲ್ಲ ಕಾಮಗಾರಿಗಳ ಉದ್ಘಾಟನೆಗೆ ತಾವು ಯೋಜನೆ ರೂಪಿಸಿಕೊಂಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಗಿರೀಶ್, ಮನು, ಸೋಮಣ್ಣ, ಕುಂಡಚ್ಚಿರ ಮಂಜು ದೇವಯ್ಯ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net