ಅಶ್ಲೀಲ ವರ್ತನೆ, ಯುವಕನ ಬಂಧನ

Arrest Kaidhi
Published on

ಪುತ್ತೂರು ಗ್ರಾಮಾಂತರ: ದಾರಿಯಲ್ಲಿ ಹೋಗುವ ಮಹಿಳೆಯರ ಮುಂದೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲ ಮಂಗಲಪದವು ನಿವಾಸಿ ರಾಜೇಶ್(32) ಬಂಧಿತ ಆರೋಪಿ.

ಅಡಕೆ ಗಾರ್ಬಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಒಳಮೊಗ್ರು ಗ್ರಾಮದ ಮಹಿಳೆಯೊಬ್ಬರು ಸೋಮವಾರ ಸಂಜೆ ಅಡಕೆ ಗಾರ್ಬಲ್ ಕೆಲಸ ಮುಗಿಸಿಕೊಂಡು ಒಳಮೊಗ್ರು ಗ್ರಾಮದ ಪರ್ಪುಂಜಕ್ಕೆ ಬಸ್‌ನಲ್ಲಿ ಬಂದು, ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಶ್ಲೀಲ ಕೈಸನ್ನೆ ಮಾಡಿದಲ್ಲದೆ, ಮುಂದೆ ಸಾಗಿದ ಆಕೆಯನ್ನು ಹಿಂಬಾಲಿಸಿ ಸ್ಕಾರ್ಪ್ ಎಳೆದಿರುವುದಾಗಿ ಆರೋಪಿಸಲಾಗಿದೆ. ದೂರದಾರ ಮಹಿಳೆಯ ಪರಿಚಯಸ್ಥರಾದ ಒಳಮೊಗ್ರು ಗ್ರಾಮದ ಇನ್ನೊಬ್ಬರು ಮಹಿಳೆಯ ಎದುರು ಕೂಡ ಆತ ಇದೇ ರೀತಿಯ ವರ್ತನೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಜೆ ಮನೆಗೆ ಹಿಂತಿರುಗುವ ಸಂದರ್ಭ ನೋಡಿ ಅಶ್ಲೀಲ ವರ್ತನೆ ತೋರುತ್ತಿದ್ದ. ಆರೋಪಿಯನ್ನು ಸಂಪ್ಯ ಪೊಲೀಸರು ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಮಂಗಳವಾರ ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net