

ಹಾವೇರಿ: ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣ ವಿಷಯದಲ್ಲಿ ದೇವಗಿರಿ-ಯಲ್ಲಾಪುರ ಸಮೀಪದ ಸ್ಥಳಕ್ಕೆ ಮತ್ತೆ ಅಪಸ್ವರ ಕೇಳಿಬಂದಿದೆ. ರಾಜ್ಯದ ಆಡಳಿತಾರೂಢ ಬಿಜೆಪಿಯ ಜನಪ್ರತಿನಿಧಿಗಳಿಂದಲೇ ಈ ಆಕ್ಷೇಪ ಕೇಳಿಬಂದಿದೆ.
2019ರ ಅಕ್ಟೋಬರ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಶಾಸಕ ನೆಹರು ಓಲೇಕಾರ ಅವರು ಈ ಜಾಗದ ಬಗ್ಗೆ ತಕರಾರು ವ್ಯಕ್ತಪಡಿಸಿದ್ದರು. ‘ಕಾಲೇಜ್ ಸ್ಥಾಪನೆಯ ಉದ್ದೇಶಿತ ಜಾಗವು ತಗ್ಗು ಪ್ರದೇಶದಲ್ಲಿದ್ದು, ಅಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ, ಸ್ಥಳ ಬದಲಾವಣೆ ಮಾಡಿ’ ಎಂದು ವಿನಂತಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಈ ಜಾಗದಲ್ಲಿ ಕಟ್ಟಡ ನಿರ್ವಣದ ಕುರಿತು ತಾಂತ್ರಿಕ ತಜ್ಞರಿಂದ ಪರಿಶೀಲಿಸಿ ವರದಿ ಸಲ್ಲಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ (ಆರ್ಸಿ) ಸೂಚಿಸಿದ್ದರು. ಆರ್ಸಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರು ಈ ಜಾಗವು ಕಟ್ಟಡ ನಿರ್ವಣಕ್ಕೆ ಸೂಕ್ತವಿದೆ ಎಂದು ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲಿಯೇ ಕಾಲೇಜ್ ನಿರ್ವಣಕ್ಕೆ ನ. 13ರಂದು ವರ್ಚುವಲ್ ವೇದಿಕೆ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಮೊದಲಿನ ಆಕ್ಷೇಪವೇನು?: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ವಿಚಾರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಹಠ ತೊಟ್ಟು ಮೆಡಿಕಲ್ ಕಾಲೇಜ್ಗೆ ಅನುದಾನ ಮಂಜೂರು ಮಾಡಿಸಿದರು. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ದೇವಗಿರಿ-ಯಲ್ಲಾಪುರ ಗ್ರಾಮದ ಹತ್ತಿರ ಗುರುತಿಸಿದ್ದ 56 ಎಕರೆ ಸರ್ಕಾರಿ ಜಮೀನಿನಲ್ಲಿ ಕಾಲೇಜ್ ಕಟ್ಟಡ ನಿರ್ವಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಜಾಗ ನಗರದಿಂದ ದೂರ ಹಾಗೂ ತಗ್ಗು ಪ್ರದೇಶದಲ್ಲಿದೆ. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಈಗಾಗಲೇ ಎಸ್ಪಿ ಕಚೇರಿ ಹಾಗೂ ಡಿಎಆರ್ ಕಚೇರಿ, ಪೊಲೀಸ್ ವಸತಿ ಗೃಹಗಳನ್ನು ಹೆಗ್ಗೇರಿಕೆರೆಯ ದಡದಲ್ಲಿ ಅವೈಜ್ಞಾನಿಕವಾಗಿ ನಿರ್ವಿುಸಿದ ಪರಿಣಾಮ ಇಲ್ಲಿ ನೀರು ನಿಂತು, ಈ ಕಟ್ಟಡಗಳು ಈಗ ಪಾಳು ಬೀಳುವಂತಾಗಿವೆ. ಎಸ್ಪಿ ಕಚೇರಿಯನ್ನು ಹಾವೇರಿಯಲ್ಲಿನ ಹಳೇ ನ್ಯಾಯಾಲಯದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸ್ ವಸತಿ ಗೃಹದಲ್ಲಿರುವ ಕುಟುಂಬದವರು ಮಳೆಗಾಲದಲ್ಲಿ ಪ್ರತಿವರ್ಷ ನೆರೆಗೆ ಸಿಲುಕುತ್ತಿದ್ದಾರೆ. ಉದ್ದೇಶಿತ ಮೆಡಿಕಲ್ ಕಾಲೇಜ್ ಕಟ್ಟಡಕ್ಕೂ ಮುಂದೇ ಇದೇ ಸ್ಥಿತಿ ಬರಬಾರದು ಎಂದು ಅನೇಕರು ದೇವಗಿರಿ-ಯಲ್ಲಾಪುರ ಸಮೀಪದ ಜಾಗಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಮಯದಲ್ಲಿ ಜಾಗ ಕಟ್ಟಡ ನಿರ್ವಣಕ್ಕೆ ಯೋಗ್ಯವಾಗಿಲ್ಲ ಎಂಬ ಆಕ್ಷೇಪ ಮಾತ್ರ ವ್ಯಕ್ತವಾಗಿತ್ತು. ಆರ್ಸಿ ವರದಿ ನಂತರ ಕೆಲ ಸಮಯ ಈ ತಕರಾರು ತಣ್ಣಗಾಗಿತ್ತು.
ರಾಜ್ಯ, ಕೇಂದ್ರ ಸಚಿವರಿಂದಲೂ ಆಕ್ಷೇಪ: ಶಂಕುಸ್ಥಾಪನೆ ನಂತರ ಜಾಗದ ಬದಲಾವಣೆ ವಿಚಾರಗಳ ಹಿಂದೆ ಅನೇಕ ಊಹಾಪೋಹಗಳು ಎದ್ದಿವೆ. ಕಾಲೇಜ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಜಾಗವು ನಗರ, ಜಿಲ್ಲಾಸ್ಪತ್ರೆ ಹಾಗೂ ಹೆದ್ದಾರಿಯಿಂದ ದೂರದಲ್ಲಿರುವ ಕುರಿತು ಅಪಸ್ವರ ಎತ್ತಿದ್ದರಂತೆ. ಅಲ್ಲದೆ, ಡಾ. ಸುಧಾಕರ ಅವರು ಇಲ್ಲಿ ಕಾಲೇಜ್ ನಿರ್ವಿುಸಿದರೆ ಎಂಸಿಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ)ನವರು ಮುಂದೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಸರ್ಕಾರದ ದುಡ್ಡು ಪೋಲಾಗುವುದು ಸರಿಯಲ್ಲ. ಸೂಕ್ತ ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಂತೆ. ಹೀಗಾಗಿ, ಈಗ ಸ್ಥಳ ಬದಲಾವಣೆಯ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ ಎಂಬ ಮಾತು ಕೇಳಿಬರತೊಡಗಿವೆ. ಸಾರ್ವಜನಿಕರು ಹಾಗೂ ಸ್ಥಳೀಯ ಶಾಸಕರು ಮೊದಲೇ ಎತ್ತಿದ್ದ ಆಕ್ಷೇಪಕ್ಕೆ ಇದೀಗ ಮತ್ತಷ್ಟು ಬಲ ಬಂದಿದೆ. ಜನರ ಅನುಕೂಲತೆಯ ದೃಷ್ಟಿಯಿಂದ ಈ ಸಾರಿ ಕಾಲೇಜ್ ದೇವಗಿರಿ-ಯಲ್ಲಾಪುರದಿಂದ ನೆಲೋಗಲ್ಲ ಗುಡ್ಡಕ್ಕೆ ಸ್ಥಳಾಂತರಗೊಳ್ಳುವ ಆಶಾಭಾವನೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದವರಲ್ಲಿ ಮೂಡಿದೆ.
ಮೆಡಿಕಲ್ ಕಾಲೇಜ್ ಸ್ಥಾಪನೆ ಸ್ಥಳ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಈ ವರದಿ ಆಧರಿಸಿ ಕಾಲೇಜ್ ಎಲ್ಲಿ ನಿರ್ವಿುಸಿದರೆ ಸೂಕ್ತ ಎಂಬ ನಿರ್ಣಯಕ್ಕೆ ಬರಲಾಗುವುದು. | ಬಸವರಾಜ ಬೊಮ್ಮಾಯಿ, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರದ ಯಾವುದೇ ಕಾಮಗಾರಿಯು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತಿರಬೇಕು ಎಂಬ ಭಾವನೆ ನನ್ನದಾಗಿತ್ತು. ಹೀಗಾಗಿ, ಈ ಮೊದಲೇ ದೇವಗಿರಿ-ಯಲ್ಲಾಪುರ ಹತ್ತಿರದಲ್ಲಿ ಕಾಲೇಜ್ ಸ್ಥಾಪನೆ ಬೇಡ ಎಂದಿದ್ದೆ. ಆದರೂ ಇಲ್ಲಿಯೇ ಶಿಲಾನ್ಯಾಸ ಮಾಡಲಾಗಿತ್ತು. ಇದೀಗ ಮತ್ತೆ ಸ್ಥಳ ಬದಲಾವಣೆಯ ವಿಷಯ ಚರ್ಚೆಗೆ ಬಂದಿರುವುದು ಸಂತಸ. ಕಾಲೇಜ್ ಹಾಗೂ ಜಿಲ್ಲಾಸ್ಪತ್ರೆ ಅಲ್ಪ ಅಂತರದಲ್ಲಿದ್ದರೆ ವಿದ್ಯಾರ್ಥಿಗಳಿಗೂ ಅನುಕೂಲ. ಹೆದ್ದಾರಿ ಪಕ್ಕದಲ್ಲಿಯೇ ಇದ್ದರೆ ಜಿಲ್ಲೆಯ ಎಲ್ಲ ತಾಲೂಕುಗಳ ಜನರು ಬಂದು ಹೋಗಲು ಅನುಕೂಲವಾಗಲಿದೆ. ಈ ಕುರಿತು ಅನೇಕ ಜನರು ನನಗೆ ಒತ್ತಾಯಿಸಿದ್ದಾರೆ. ಹೀಗಾಗಿ, ನೆಲೋಗಲ್ಲ ಗುಡ್ಡದ ಹತ್ತಿರದ ಸರ್ಕಾರಿ ಜಾಗದಲ್ಲಿ ಕಾಲೇಜ್ ಮಾಡಿದರೆ ಸೂಕ್ತ. | ನೆಹರು ಓಲೇಕಾರ, ಶಾಸಕ, ಹಾವೇರಿ ಮೆಡಿಕಲ್ ಕಾಲೇಜ್ನ ಈಗಿನ ಸ್ಥಳ ಹಾಗೂ ಇನ್ನು ಕೆಲವು ಸ್ಥಳಗಳ ಪರಿಶೀಲನೆ ನಡೆಸಿ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಇದರಂತೆ ನಾನು ಈಗಾಗಲೇ ಈಗಿನ ದೇವಗಿರಿ-ಯಲ್ಲಾಪುರ, ನೆಲೋಗಲ್ಲ, ಗೌರಾಪುರ, ಮಾಳಾಪುರ ಬಳಿಯಲ್ಲಿರುವ ಸರ್ಕಾರಿ ಜಾಗ ಪರಿಶೀಲಿಸಿದ್ದೇನೆ. ತಾಂತ್ರಿಕ ತಜ್ಞರ ಅಭಿಪ್ರಾಯ ಪಡೆದು ಸಚಿವರಿಗೆ ವರದಿ ಸಲ್ಲಿಸುತ್ತೇನೆ. ಸ್ಥಳ ಬದಲಾವಣೆ ಕುರಿತು ಎಂಸಿಐನಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಸಚಿವರ ಸೂಚನೆ ಮೇರೆಗೆ ವರದಿ ತಯಾರಿಸಲಾಗುತ್ತಿದೆ. | ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ, ಹಾವೇರಿ