

ಹುಣಸೂರು: ಬಸ್ ಚಾಲನೆ ವೇಳೆ ಸಂಚಾರ ನಿಯಮಗಳ ಪರಿಪಾಲನೆ ಕಡ್ಡಾಯವಾಗಿ ಅನುಸರಿಸುವ ಮೂಲಕ ಅಪಘಾತಗಳನ್ನು ತಡೆಯುವಲ್ಲಿ ಚಾಲಕರು ಜವಾಬ್ದಾರಿ ನಡೆ ಅನುಸರಿಸಬೇಕೆಂದು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ ತಿಳಿಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಶನಿವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲಿ ಮಾತನಾಡಿದರು.
ಸಂಚಾರಿ ನಿಯಮಗಳ ಪಾಲನೆಯಿಂದಾಗಿ ನಿಮ್ಮನ್ನು ನಂಬಿ ಬಂದಿರುವ 50ಕ್ಕೂ ಹೆಚ್ಚು ಪ್ರಯಾಣಿಕರ ಕುಟುಂಬಗಳು ಸುರಕ್ಷಿತವಾದಂತೆ. ಮಾತ್ರವಲ್ಲದೇ ನಿಮ್ಮ ಕುಟುಂಬವೂ ನಿಮ್ಮನ್ನು ನಂಬಿ ಮನೆಯಲ್ಲಿದೆ ಎನ್ನುವ ಗಮನ ನಿಮಗಿರಲಿ. ನೀವು ಪ್ರತಿನಿತ್ಯ ಸಂಚರಿಸುವ ರಸ್ತೆಯಲ್ಲಿ ಅನಾಹುತಗಳಿಗೆ ಎಡೆಯುಂಟು ಮಾಡುವಂತಹ ಪರಿಸ್ಥಿತಿಗಳಿದ್ದರೆ ಅವುಗಳನ್ನು ನಮ್ಮ ಇಲಾಖೆಗೆ ಅಥವಾ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದನ್ನು ಮರೆಯಬೇಡಿ. ರಸ್ತೆಯಲ್ಲಿ ಆಳೆತ್ತರದ ಗುಂಡಿಯಿರುವುದು, ಸಂಚಾರಿ ನಿಯಮಗಳನ್ನು ತಿಳಿಸುವ ನಾಮಫಲಕದ ಸುತ್ತ ಗಿಡಗಂಟಿ ಬೆಳೆದಿರುವುದು, ನೆಲದಲ್ಲಿ ಬಿದ್ದಿರುವುದು ಹೀಗೆ ಹಲವು ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿರಿ ಎಂದು ಕೋರಿದರು.
ಅತಿಯಾದ ವೇಗಕ್ಕೆ ಬ್ರೇಕ್ ಹಾಕಿ:
ಸಮಯವನ್ನು ಉಳಿಸುವ ಉದ್ದೇಶದಿಂದ ಅತಿಯಾದ ವೇಗದಲ್ಲಿ ವಾಹನ ಚಾಲನೆ ಬೇಡ. ರಸ್ತೆಯ ತುಂಬ ನೀವೇ ಚಲಿಸುತ್ತಿದ್ದರೆ ಅಕ್ಕಪಕ್ಕದ ದ್ವಿಚಕ್ರವಾಹನ ಸವಾರರು ಗಲಿಬಿಲಿಗೊಂಡು ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ಕಾಲೇಜು ಹುಡುಗರು ಹುಡುಗಾಟಿಕೆ ನಡೆಸುತ್ತಿದ್ದರೆ, ಅವರಿಗೆ ದಾರಿಬಿಟ್ಟು ಬಿಡುವ ಮೂಲಕ ಆಗಬಹುದಾದ ಅನಾಹುತ ತಡೆಯಿರಿ. ಫುಟ್‌ಪಾತ್ ಮೇಲೆ ವಾಹನಗಳು, ತಳ್ಳುವಗಾಡಿಗಳ ಹಾವಳಿ ಹೆಚ್ಚಾಗಿ ಚಾಲನೆ ಕಷ್ಟಸಾಧ್ಯವಾಗಿರುವ ಜಾಗಗಳ ಕುರಿತು ನಮಗೆ ಮಾಹಿತಿ ನೀಡಿ. ಬಸ್ ನಿರ್ವಾಹಕರು ಮತ್ತು ಚಾಲಕರು ಇಬ್ಬರೂ ಜವಾಬ್ದಾರಿಯಿಂದ ಗಮನಿಸಿದಲ್ಲಿ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ. ಡಿಪೋದಲ್ಲಿ ಕರ್ತವ್ಯ ನಿರ್ವಹಿಸುವ ಮೆಕ್ಯಾನಿಕ್‌ಗಳು ಕೂಡ ಬಸ್‌ಗಳು ಸುಸ್ಥಿತಿಯಲ್ಲಿರುವಂತೆ ಗಮನಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿರಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಡಿಪೋ ಮ್ಯಾನೇಜರ್ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.