

ನಾಪೋಕ್ಲು: ವಾಹನಗಳ ಚಾಲನಾ ಪರವಾನಗಿ, ಸೂಕ್ತ ದಾಖಲೆಗಳು ಇಲ್ಲದೆ ವಾಹನಗಳನ್ನು ಚಲಾಯಿಸಬಾರದು ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಸಮೀಪದ ಚೆರಿಯಪರಂಬುವಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮದಲ್ಲಿ ಸ್ಥಳೀಯ ಮಾತನಾಡಿದ ಅವರು, ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನುಗಳನ್ನು ಗೌರವಿಸಬೇಕು ಎಂದರು.
ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುವುದು, ಇನ್ಶೂರೆನ್ಸ್ ಇಲ್ಲದೆ, ಸೀಟ್ ಬೆಲ್ಟ್ ಹಾಕದೆ ಕಾರು ಚಾಲನೆ ಮಾಡುವುದು, ಬೈಕ್‌ಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಕುಳಿತು ಸಾಗುವವರಿಗೆ ತಿಳಿವಳಿಕೆ ಮೂಡಿಸಲಾಯಿತು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಜನರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭ ಯುವಕರು ನಾವು ಹೆಲ್ಮೆಟ್ ಹಾಕಿ ಕಾನೂನು ಪಾಲನೆ ಮಾಡಿ ಸಹಕರಿಸುವುದಾಗಿ ಠಾಣಾಧಿಕಾರಿಗೆ ಭರವಸೆಯನ್ನು ನೀಡಿದರು.