ಸಂಘಟನೆಯಿಂದ ಗೆಲುವು ಸಾಧ್ಯ

chn padagrahana
Published on

ಚನ್ನಗಿರಿ: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸಬೇಕಾದರೆ ಪಕ್ಷದ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನೂತನ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದೆ. ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ, ಯಾರಿಂದಲೂ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಲೂಕಿನಲ್ಲಿ ಮಾಜಿ ಸಿಎಂ ಜೆ.ಎಚ್. ಪಟೇಲ್ ಅವರು ಇರುವವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗಲಿಲ್ಲ. ಪ್ರಥಮ ಬಾರಿಗೆ ಬಿಜೆಪಿ ಶಾಸಕನಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿದ್ದು, ಈವರೆಗೂ ಬಿಜೆಪಿ ಆಡಳಿತ ನಡೆಸಿದೆ ಮುಂದಿನ ದಿನಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂದರು.

ರಾಜಕೀಯದಲ್ಲಿ ಅನೇಕ ಕಹಿ ಮತ್ತು ಸಿಹಿ ಅನುಭವ ಕಂಡಿದ್ದೇನೆ. ನನ್ನ ಸಹಕಾರದಿಂದ ಅಧಿಕಾರಕ್ಕೆ ಬಂದು ಮೋಸ ಮಾಡಿ ಹೋದವರನ್ನು ನೋಡಿದ್ದೇನೆ. ಮುಂದಿನ ದಿನದಲ್ಲಿ ಅಂತಹ ಘಟನೆ ನಡೆಯಲು ಬಿಡುವುದಿಲ್ಲ. ಪ್ರಾಮಾಣಿಕರನ್ನು ಪಕ್ಷ ಖಂಡಿತ ಗುರುತಿಸುತ್ತದೆ ಎಂದು ತಿಳಿಸಿದರು.

ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ಮಾತನಾಡಿ, ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುತ್ತದೆ. ಅದಕ್ಕೆ ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಾರಣವಾಗಿದೆ. ಎಲ್ಲ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಮಾಡಾಳು ಕುಟುಂಬವನ್ನು ನಾಶ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸಿದ್ದವು. ಆದರೆ ನ್ಯಾಯ ಮತ್ತು ಜನರ ಪರವಾಗಿ ಇರುವ ಕುಟುಂಬವನ್ನು ಯಾರು ಏನು ಮಾಡಲಾಗಲಿಲ್ಲ ಎಂದರು.

ನೂತನ ಬಿಜೆಪಿ ಮಂಡಲ ಅಧ್ಯಕ್ಷ ಮಲಹಾಳ್ ಕುಮಾರ್ ಅವರಿಗೆ ಜಿಲ್ಲಾ ಅಧ್ಯಕ್ಷ ರಾಜಶೇಖರ್ ನಾಗಪ್ಪ ಬಾವುಟ ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಚುನಾವಣಾ ಅಧಿಕಾರಿ ಭೈರಪ್ಪ, ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಕೆಂಚಪ್ಪ, ತಾಪಂ ಮಾಜಿ ಅಧ್ಯಕ್ಷ ಪಿ. ಲೋಹಿತ್​ಕುಮಾರ್, ಬಸವರಾಜ್, ಸಂತೇಬೆನ್ನೂರು ಬಸವರಾಜ್, ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕಪ್ಪ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net