ವಿದ್ಯಾರ್ಥಿ ಆತ್ಮಹತ್ಯೆ ಸಮಗ್ರ ತನಿಖೆಯಾಗಲಿ

Published on

ಸಿಂಧನೂರು: ತಾಲೂಕಿನ ಗುಂಜಳ್ಳಿ ಗ್ರಾಮದ ದಲಿತ ವಿದ್ಯಾರ್ಥಿ ಆತ್ಮಹತ್ಯೆಯನ್ನು ಸಮಗ್ರ ತನಿಖೆ ಮಾಡಿ, ನೊಂದ ಕುಟುಂಬಕ್ಕೆ ಪರಿಹಾರ, ಉದ್ಯೋಗ ಹಾಗೂ ಸರ್ಕಾರಿ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಬುಧವಾರ ತಹಸೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿತು.

ನಗರದಲ್ಲಿ ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿ ಹಿರೇ ಹುಸೇನಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲ ಸೌಕರ್ಯ ಕೇಳಿದ್ದಕ್ಕೆ ವಿದ್ಯಾರ್ಥಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವುದಲ್ಲದೇ ಜಾತಿ ನಿಂದನೆ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿ ಪೋಷಕರಿಗೆ ತಿಳಿಸಿದ್ದು ಕೊನೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಕೀಯ ಒತ್ತಡ ಇಲ್ಲದೇ ಸಮಗ್ರ ತನಿಖೆಯಾಗಬೇಕು. ಸಂತ್ರಸ್ತ ನೊಂದ ಕುಟುಂಬಕ್ಕೆ ಪರಿಹಾರ, ಉದ್ಯೋಗ, ಭೂಮಿ ನೀಡಬೇಕು. ಈ ಪ್ರಕರಣದ ಪ್ರಮುಖ ಆರೋಪಿಗಳು ಬಲಿಷ್ಠರಿದ್ದು ತನಿಖೆ ದಿಕ್ಕು ಬದಲಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಂಬಣ್ಣ ಉಪ್ಪಲದೊಡ್ಡಿ, ಪರಶುರಾಮ, ಬಸವರಾಜ ಧುಮತಿ, ಹುಸೇನಪ್ಪ, ಸಿದ್ದಪ್ಪ ಸೋಮಲಾಪುರ, ನರಸಪ್ಪ ಕಟ್ಟಿಮನಿ, ಮುನಿಯಪ್ಪ, ವೀರೇಶ ಕುನ್ನಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net