

ಬೇಲೂರು: ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಪಲಿಮಾರು ಮಠದ ವತಿಯಿಂದ 17ನೇ ಶ್ರೀಮದ್ ಬ್ರಹ್ಮಸೂತ್ರ-ಅನುವ್ಯಾಖ್ಯಾನ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವವನ್ನು ಮೇ 31ರಿಂದ ಜೂನ್ 2ರವರೆಗೆ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆವರಣ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಈಗಾಗಲೇ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. 31ರಂದು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಪೀಠಾಧೀಶ ಶ್ರೀ ಸುಬೇಂದ್ರ ತೀರ್ಥ ಸ್ವಾಮೀಜಿ ‘ಜ್ಞಾನ ಸತ್ರ’ವನ್ನು ಉದ್ಘಾಟಿಸುವರು. ಜೂ.1 ರಂದು ಶ್ರೀ ಉತ್ತರಾದಿ ಮಠದ ಪೀಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ‘ಶ್ರೀಮನ್ ನ್ಯಾಯಸುಧಾ ಪರೀಕ್ಷೆ ’ ಹಾಗೂ ಇನ್ನಿತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಜೆ ಮೈಸೂರು ರಾಮಚಂದ್ರಾಚಾರ್ಯ ಮತ್ತು ತಂಡದವರಿಂದ ‘ದಾಸವಾಣಿ’ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಜೂ.2ರಂದು ಬೆಳಗ್ಗೆ 9 ಗಂಟೆಗೆ ಬೇಲೂರಿನ ರಥ ಬೀದಿಯಲ್ಲಿ ಶೋಭಾ ಯಾತ್ರೆ ನಡೆಯಲಿದೆ. ನಂತರ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಪಟ್ಟದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಅವರಿಂದ ನ್ಯಾಯಸುಧಾ ಗ್ರಂಥದ ಪರಿಚಯ ಮತ್ತು ಅನುವಾದ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಚನ್ನಕೇಶವಸ್ವಾಮಿ ಸನ್ನಿಧಾನದಲ್ಲಿ ಕೇಶವ ನಾಮ ಪರಿಕ್ರಮ ಅಂಗವಾಗಿ ಸಾಮೂಹಿಕವಾಗಿ ನಡೆಸಿದ ‘ಕೇಶವ ನಾಮ ಸಂಕೀರ್ತನೆಯ 24 ಲಕ್ಷ ಬಾರಿ ಪಾರಾಯಣ ಸಮರ್ಪಣೆ’ಯನ್ನು ಕೇಶವ ನಾಮ ಪಾರಾಯಣದೊಂದಿಗೆ ಪ್ರದಕ್ಷಿಣಾ ನಮಸ್ಕಾರ ಮಾಡಲಾಗುತ್ತದೆ. ವಿವಿಧ ಮಠಗಳ ಪೀಠಾಧೀಶರು ಪಾಲ್ಗೊಳ್ಳಲಿದ್ದಾರೆ. ಪ್ರತಿನಿತ್ಯ ನಿರಂತರ ಭಜನಾ ಸಂಕೀರ್ತನೆ ಸೇವಾ ಕಾರ್ಯಕ್ರಮವನ್ನು ವಿವಿಧ ಭಜನಾ ಮಂಡಳಿಗಳ ಸದಸ್ಯರು ನಡೆಸಿಕೊಡಲಿದ್ದಾರೆ.