ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅವಶ್ಯ

13blrp2
Published on

 ಬೇಲೂರು: ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ತಾಲೂಕಿನ ಬಿಕ್ಕೋಡು ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ 50ಕ್ಕೂ ಹೆಚ್ಚು ಬಗೆಯ ತರಕಾರಿಗಳು, ವಿವಿಧ ಧಾನ್ಯಗಳು, ಕಾಳು, ಹಣ್ಣು, ಸೊಪ್ಪು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಯಿತು.

ಬಿಕ್ಕೋಡು ಪ್ರಾಥಾಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣ್ ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕ ಹಾಗೂ ಗರ್ಭಿಣಿಯರು, ತಾಯಂದಿರು, ಮಕ್ಕಳು ಪೌಷ್ಟಿಕಾಂಶಯುಕ್ತ ಸಮತೋಲನ ಆಹಾರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುವುದು ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೇತ್ರಾವತಿ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಟಿಕಾಂಶ ಅತ್ಯಂತ ಮುಖ್ಯ. ಗರ್ಭಧಾರಣೆಯ ಅವಧಿಯಲ್ಲಿ ತಾಯಿಯ ಆರೋಗ್ಯ ಮತ್ತು ಶಿಶುವಿನ ಬೆಳವಣಿಗೆ ಎರಡೂ ಸಮತೋಲನ ಆಹಾರದ ಮೇಲೆ ಅವಲಂಬಿತವಾಗಿವೆ. ಹಸಿರೆಲೆ ತರಕಾರಿಗಳು, ತಾಜಾ ಹಣ್ಣುಗಳು, ಕಾಳುಗಳು, ಬೇಳೆ, ಹಾಲು ಹಾಗೂ ಮೊಸರು ಪ್ರತಿದಿನವೂ ಆಹಾರದಲ್ಲಿರಬೇಕು. ಇದರಿಂದ ಕಬ್ಬಿಣಾಂಶ, ವಿಟಮಿನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ದೊರೆಯುತ್ತದೆ. ಮತ್ತು ಗರ್ಭಧಾರಣೆಯ ಸಮಯದಲ್ಲಿ ರಕ್ತಹೀನತೆ ತಡೆಯಲು ಕಬ್ಬಿಣಾಂಶಯುತ ಆಹಾರ ಅತ್ಯಗತ್ಯ. ಮಾಂಸಾಹಾರಿಗಳು ಮಾಂಸ, ಮೊಟ್ಟೆ ಸೇವಿಸಬಹುದು. ಶಾಖಾಹಾರಿಗಳು ಹುರಳಿ, ಕಡಲೆ, ಹುರುಳಿಕಾಳು, ಬಾದಾಮಿ, ನೆಲ್ಲಿಕಾಯಿ, ಹುಣಸೆಹಣ್ಣು ಮುಂತಾದವುಗಳನ್ನು ಸೇವಿಸಬೇಕು. ತಾಜಾ ಹಣ್ಣು-ತರಕಾರಿಗಳ ಜತೆಗೆ ಹಣ್ಣುಗಳ ರಸ, ಮೊಸರಿನಂತ ಆಹಾರ ಪದಾರ್ಥಗಳು ಸಹ ಆರೋಗ್ಯಕರವಾಗಿವೆ. ಗರ್ಭಿಣಿಯರು ದಿನಕ್ಕೆ ಮೂರು ಬಾರಿ ಮುಖ್ಯ ಆಹಾರ ತೆಗೆದುಕೊಳ್ಳುವುದರೊಂದಿಗೆ ಸಣ್ಣ ಪ್ರಮಾಣದ ತಿನಿಸುಗಳನ್ನು ಮಧ್ಯಂತರವಾಗಿ ಸೇವಿಸಬೇಕು. ಶುದ್ಧ ಕುಡಿಯುವ ನೀರು ಸೇವನೆಗೂ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ಸಮತೋಲನ ಪೌಷ್ಟಿಕ ಆಹಾರ ಸೇವನೆಯಿಂದ ಗರ್ಭಿಣಿಯರಲ್ಲಿ ಉಂಟಾಗಬಹುದಾದ ಅನೇಕ ಆರೋಗ್ಯ ಸಮಸ್ಯೆಗಳು ತಡೆಯಬಹುದು. ಇದರಿಂದ ಜನಿಸುವ ಶಿಶು ಆರೋಗ್ಯವಂತವಾಗಿರಲು ಸಹಾಯಕವಾಗುತ್ತದೆ ಎಂದರು.

ದೇವಿರಮ್ಮ, ಭಾರತಿ, ಸುಶೀಲಾ, ಹೊನ್ನಮ್ಮ, ಉಷಾ, ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net