

ನಾಗಮಂಗಲ: ಈಗಿನ ಯುವಪೀಳಿಗೆಯಷ್ಟೆ ಅಲ್ಲದೆ ಹಿರಿಯರೂ ಮೂಲ ಆಹಾರ ಕ್ರಮವನ್ನು ಮರೆತು ಪಿಜ್ಜಾ, ಬರ್ಗರ್‌ನಂತಹ ಸಂಸ್ಕೃತಿಗೆ ಮಾರುಹೋಗಿದ್ದು, ಪೌಷ್ಟಿಕ ಆಹಾರವೆಂದರೆ ಮೂಗು ಮುರಿಯುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಾಗಮಂಗಲ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಸಮಾಜ ಅಪೌಷ್ಟಿಕತೆಯ ಗೂಡಾಗಿದೆ, ಜಾಗತೀಕರಣದ ಗಾಳಿಗೆ ನಮ್ಮನ್ನು ಒಡ್ಡಿಕೊಳ್ಳುವ ಭರದಲ್ಲಿ ನಮ್ಮ ಮೂಲ ಆಹಾರ ಕ್ರಮ ಮರೆತು ಸಮಾಜವನ್ನು ಅಪೌಷ್ಟಿಕತೆಯ ಕಣಜವಾಗಿಸಿದ್ದೇವೆ. ರೋಗಪೀಡಿತ ಸಮಾಜವನ್ನು ಸರಿದಾರಿಗೆ ತರುವಲ್ಲಿ ತಾಯಂದಿರ ಇಚ್ಛಾಶಕ್ತಿಯೇ ವರದಾನವಾಗಬೇಕಿದೆ. ದಿನದಿಂದ ದಿನಕ್ಕೆ ನಮ್ಮ ಆಹಾರ ಕ್ರಮ ಸಂಪೂರ್ಣ ಬದಲಾವಣೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಪೌಷ್ಟಿಕ ಆಹಾರ ಸಮ್ಮೇಳನ ನಿಜಕ್ಕೂ ಸಂತೋಷಕರ ಸಂಗತಿ. ಈ ಸಮ್ಮೇಳನದಲ್ಲಿ ಹಿಂದಿನ ಕಾಲದ ಸಿರಿಧಾನ್ಯ ನವಣೆ ಅನ್ನ ಮರುಕಳಿಸಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಪಿಜ್ಜಾ ಸಂಸ್ಕೃತಿ ಬಿಟ್ಟು ಮೂಲ ಆಹಾರ ಪದ್ಧತಿಗೆ ಆದ್ಯತೆ ಕೊಟ್ಟಿರುವುದು ಸ್ವಾಗತಾರ್ಹ.
ತಾಯಂದಿರು ಮನಸು ಮಾಡಿದರೆ ಮಕ್ಕಳನ್ನು ತಿದ್ದಬಹುದು. ಮಕ್ಕಳ ಮನವನ್ನು ಕೂಡಿಸುವ ಕೆಲಸವಾಗಬೇಕು. ಮಕ್ಕಳು ಇಂದು ಹಾಲು ಕುಡಿಯಲು ತಕರಾರು ಮಾಡುತ್ತಿರುವುದು ದೊಡ್ಡ ದುರಂತ. ಈ ಸಮಾಜ ಆರೋಗ್ಯವಂತರಾಗಿರಲು ತಾಯಂದಿರಿಂದ ಸಂವಹನ ಸಾಧ್ಯ. ತಾಯಂದಿರು ಮಕ್ಕಳಲ್ಲಿ ಕಾಯಕಲ್ಪ ಮಾಡಬಹುದು. ದೇಹದಲ್ಲಿ ತೇಜಸ್ಸಷ್ಟೇ ಅಲ್ಲದೇ ವ್ಯಕ್ತಿತ್ವದ ನಿರ್ಮಾಣ ಮಾಡುವುದೆ ಪೌಷ್ಟಿಕ ಆಹಾರ, ಅದರಿಂದ ವಿಮುಖರಾಗುತ್ತಿರುವುದು ತುಂಬಾ ಬೇಸರದ ಸಂಗತಿ ಎಂದರು.
ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಒಂದು ದೇಶವನ್ನು ಗಟ್ಡಿಯಾಗಿ ಕಟ್ಟಬೇಕಾದರೆ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದೇಶ ಸಬಲವಾಗಿ ಬೆಳೆಯುತ್ತದೆ ಮನುಷ್ಯನಿಗೆ ಇತ್ತೀಚಿನ ಆಹಾರ ಪದ್ಧತಿಗಳಿಂದಲೇ ಅತೀ ಹೆಚ್ಚು ರೋಗಗಳಿಗೆ ಕಾರಣವಾಗಿದೆ. ಆಹಾರ ಪದ್ಧತಿ ಉತ್ತಮವಾಗಿರಬೇಕು, ಪೌಷ್ಟಿಕ ಆಹಾರ ಕ್ರಮಕ್ಕೆ ಪ್ರಾಮುಖ್ಯತೆ ನೀಡಬೇಕು. ಸಮತೋಲನ ಆಹಾರಕ್ಕೆ ಮನ್ನಣೆ ಅಗತ್ಯ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿದರೆ ಆರೋಗ್ಯ ಸುಸ್ಥಿರವಾಗಿರುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಯೋಗೇಶ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಯೋಗ ತರಬೇತುದಾರ ಲಕ್ಷ್ಮಣ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಆವರಣದಲ್ಲಿ ಪೌಷ್ಟಿಕ ಆಹಾರದ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಹಾಗೂ ಮಕ್ಕಳಿಗೆ ಅನ್ನ ಪ್ರಾಶನ ಏರ್ಪಡಿಸಲಾಗಿತ್ತು.