

ಮಸ್ಕಿ: ನರೇಗಾ ಯೋಜನೆಯ ಮಹಿಳಾ ಕೂಲಿಕಾರರ ಅನುಕೂಲಕ್ಕಾಗಿ ಮಸ್ಕಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಿರುವ ಕೂಸಿನ ಮನೆಗಳಿಗೆ ಬುಧವಾರ ರಾಜ್ಯ ಮಟ್ಟದ ಮೊಬೈಲ್ ಕ್ರಶ್‌ನ ಸಂಯೋಜನಾಧಿಕಾರಿ ಚಿದಾನಂದ ಭೇಟಿ ನೀಡಿದರು.
ಇದನ್ನೂ ಓದಿ: ಕೂಸಿನಮನೆಗೆ ಮಕ್ಕಳನ್ನು ಕರೆತನ್ನಿ
ತಾಲೂಕಿನ ಕನ್ನಾಳ ಗ್ರಾಪಂ.ವ್ಯಾಪ್ತಿಯ ಹಂಪನಾಳ ಗ್ರಾಮದಲ್ಲಿ ಆರಂಭಿಸಿದ ಕೂಸಿನ ಮನೆಗಳಲ್ಲಿ ಕಲ್ಪಿಸಿರುವ ಕುಡಿಯುವ ನೀರು, ಶೌಚಗೃಹ, ಆಸನದ ವ್ಯವಸ್ಥೆ ಸೇರಿ ವಿವಿಧ ಮೂಲ ಸೌಕರ್ಯಗಳನ್ನು ವೀಕ್ಷಿಸಿದರು. ಮಕ್ಕಳ ಹಾಜರಾತಿ, ಶಿಶು ಪಾಲಕಿಯರ ಹಾಜರಾತಿ ಜತೆಗೆ ಕೂಸಿನ ಮನೆಗೆ ನಿರ್ವಹಣೆಗೆ ಬೇಕಾಗುವ ದಿನ ನಿತ್ಯ ಬಳಕೆಯ ಅಡುಗೆ ಸಾಮಗ್ರಿಗಳ ಕುರಿತು ಮಾಹಿತಿ ಪಡೆದರು.
ಆರಂಭದಲ್ಲಿ ಮಕ್ಕಳಿಗೆ ಶೇಂಗಾ ಚಿಕ್ಕಿ, ಹಾಲು, ಬಿಸ್ಕತ್, ಹಣ್ಣು ನೀಡುತ್ತಿರುವುದಾಗಿ ಶಿಶು ಪಾಲಕಿಯರು ತಿಳಿಸಿದರು. ಪ್ರತಿಕ್ರಿಯಿಸಿದ ಚಿದಾನಂದ, ಜಿಲ್ಲಾ ಸಮಿತಿ ನಿಗದಿಪಡಿಸಿದಂತೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು. ಕೇಂದ್ರಕ್ಕೆ ಅಗತ್ಯ ಸೌಕರ್ಯಗಳನ್ನು ಗ್ರಾಪಂಯ 15ನೇ ಹಣಕಾಸು ಸೇರಿ ವಿವಿಧ ಮೂಲಗಳಿಂದ ಖರ್ಚು ಮಾಡಬಹುದಾಗಿದೆ ಎಂದು ಪಿಡಿಒಗೆ ತಿಳಿಸಿದರು.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ನರೇಗಾದಡಿ ಕೂಲಿ ಕೆಲಸ ನೀಡಲಾಗುತ್ತದೆ. ತಾಯಂದಿರು ಮಕ್ಕಳನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುವುದರಿಂದ ಮಕ್ಕಳು ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ಮಕ್ಕಳ ಪಾಲನೆ ಪೋಷಣೆಗೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರ ಪೂರ್ವ ಅಂಗನವಾಡಿ ಮಾದರಿಯಲ್ಲಿ ಕೂಸಿನ ಮನೆಗಳನ್ನು ಆರಂಭಿಸಿದ್ದು, ಇದರ ಯಶಸ್ಸಿಗೆ ಪಿಡಿಒಗಳು ಮುತುವರ್ಜಿ ವಹಿಸಬೇಕು ಎಂದರು.
ಮಸ್ಕಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ನೋಡಲ್ ಅಧಿಕಾರಿ ಶಿವಾನಂದರಡ್ಡಿ, ಪಿಡಿಒ ಮಲ್ಲಿಕಾರ್ಜುನ, ನಾಗೇಶ್, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿಯರಾದ ಮಂಜುಳಾ, ರಾಧಾ, ಅಂಗನವಾಡಿ ಕಾರ್ಯಕರ್ತೆಯರಾದ ಅಮೃತಾ, ವಿಜಯಲಕ್ಷ್ಮೀ, ಟಿಐಇಸಿ ಸತೀಶ್, ಬಿಎಫ್ಟಿಗಳಾದ ವೀರಮ್ಮ, ಸುಖಮುನಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ನಾಗಪ್ಪ ಇದ್ದರು.