

ಯಶೋಧರ ವಿ.ಬಂಗೇರ
ಇರುವೈಲಿನಲ್ಲಿರುವ ದಾದಿಯರ ವಸತಿ ಕಟ್ಟಡ ಎರಡು ವರ್ಷಗಳ ಹಿಂದೆ ದುರಸ್ತಿಯಾದರೂ ನಿರುಪಯುಕ್ತ ಸ್ಥಿತಿಯಲ್ಲಿದೆ. ಕಳೆದ 30 ವರ್ಷಗಳಿಗೂ ಅಧಿಕ ಕಾಲ ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದವು ಎಂಬಲ್ಲಿ ವೈದ್ಯಕೀಯ ಸೇವೆ ನೀಡುವುದರೊಂದಿಗೆ ದಾದಿಯರಿಗೆ ವಸತಿಗೆ ಉಪಯೋಗವಾಗಿದ್ದ ಕಟ್ಟಡ, ಕೆಲವು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿತ್ತು. ಪಂಚಾಯಿತಿ ಸದಸ್ಯ ವಲೇರಿಯನ್ ಕುಟಿನ್ಹಾ ಈ ಕುರಿತು ಮುತುವರ್ಜಿವಹಿಸಿ, ಶಾಸಕರ ಬಳಿ ಕಟ್ಟಡ ದುರಸ್ತಿಗೊಳಿಸುವಂತೆ ವಿನಂತಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಉಮಾನಾಥ ಎ.ಕೋಟ್ಯಾನ್ ಶಾಸಕರ ನಿಧಿಯಿಂದ 6 ಲಕ್ಷ ರೂ. ಅನುದಾನ ದುರಸ್ತಿಗಾಗಿ ಒದಗಿಸಿದ್ದರು. ಕಟ್ಟಡ ದುರಸ್ತಿಗೊಂಡ ಬಳಿಕ ಈ ಕಟ್ಟಡ ನಿರುಪಯುಕ್ತವಾಗಿದ್ದು, ಪಾಳು ಬಿದ್ದಂತಾಗಿದೆ.
ಆರೋಗ್ಯ ಇಲಾಖೆಯದ್ದೇ ಕಟ್ಟಡ: ಹೊಸ ಪಂಚಾಯಿತಿಯಾಗಿ ಅಸ್ತಿತ್ವಗೊಂಡ ಬಳಿಕ ಮುಲಿಬೆಟ್ಟು ಸ್ಥಳದಲ್ಲಿದ್ದ ಇರುವೈಲು ಗ್ರಾಮ ಪಂಚಾಯಿತಿ ಸ್ವಂತ ಕಟ್ಟಡ ಆ ಬಳಿಕ ಈ ಕಟ್ಟಡದ ಪಕ್ಕದಲ್ಲೇ ನಿರ್ಮಾಣವಾಗಿದೆ. ಆರೋಗ್ಯಾಧಿಕಾರಿಗಳು ದಾದಿಯರ ವಸತಿ ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಪಿಡಿಒ ಶೇಖರ್, ಆ ಕಟ್ಟಡ, ಅದಕ್ಕೆ ಸಂಬಂಧಪಟ್ಟ ಜಾಗ ಆರೋಗ್ಯ ಇಲಾಖೆಗೆ ಸೇರಿರುವಂತದ್ದು, ಈ ಕಾರಣದಿಂದ ನಾವು ಹಸ್ತಾಂತರ ಮಾಡುವ ವಿಚಾರ ಬರುವುದಿಲ್ಲ ಎಂದಿದ್ದಾರೆ. ಗ್ರಾಮಸಭೆಯಲ್ಲೂ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಕಟ್ಟಡದ ಕುರಿತು ಚರ್ಚಿಸಿದ್ದಾರೆ.
ದಾರಿಗಾಗಿ ಗ್ರಾಪಂ ಮನವಿ: ಪಂಚಾಯಿತಿ ಕಾರ್ಯಾಲಯ ಹಾಗೂ ದಾದಿಯರ ವಸತಿ ಕಟ್ಟಡವಿರುವ ಜಾಗಕ್ಕೆ ಇರುವೈಲು ಮುಖ್ಯರಸ್ತೆಯಿಂದ ಕೆಲವೇ ಮೀಟರ್‌ಗಳ ಅಂತರವಿದೆ. ಆದರೆ ಪಂಚಾಯಿತಿ ಎದುರಿನ ಜಾಗ ಖಾಸಗಿಯವರಿಗೆ ಸೇರಿದ್ದರಿಂದ, ಗ್ರಾಮಸ್ಥರು ಕೊನ್ನೆಪದವು ಜಂಕ್ಷನ್‌ನ ಆಟೋ ಪಾರ್ಕ್ ಬಳಿಯಿಂದ ಕೊನ್ನೆಪದವು ಜಂಕ್ಷನ್ ಆಟೋ ಪಾರ್ಕ್ ಬಳಿಯಿಂದ ಸುತ್ತುಬಳಸಿ ಸುಮಾರು ಎರಡು ಕಿ.ಮೀ ಕ್ರಮಿಸಿ ಬರಬೇಕಾಗಿದೆ. ಈ ಕುರಿತು ಗ್ರಾಪಂ, ಜಾಗಕ್ಕೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದೆ.
ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಶಾಸಕರ ನಿಧಿಯಿಂದ ಎರಡು ವರ್ಷಗಳ ಮುಂಚೆ ದುರಸ್ತಿ ಮಾಡಿಸಿದ್ದೇವೆ. ಆದರೆ ಆರೋಗ್ಯ ಇಲಾಖೆ ಈ ಕುರಿತು ಹೆಚ್ಚು ಗಮನಹರಿಸದೆ ಇರುವುದರಿಂದ ಕಟ್ಟಡ ನಿರುಪಯುಕ್ತವಾಗಿದೆ. ಈ ಕುರಿತು ಗ್ರಾಮಸಭೆಯಲ್ಲೂ ಸದಸ್ಯರು, ಗ್ರಾಮಸ್ಥರು ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಸ್ಪಂದನೆ ಇಲ್ಲ. ವಲೇರಿಯನ್ ಕುಟಿನ್ಹಾ ಸದಸ್ಯ, ಇರುವೈಲು ಗ್ರಾಪಂ