ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್​; ನರ್ಸ್​ ಮೃತ್ಯು

Nurse Death
Published on

ದಾವಣಗೆರೆ: ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸಾಗುತ್ತಿದ್ದ ವೇಳೆ ಆಂಬುಲೆನ್ಸ್​ ಕ್ಯಾಂಟರ್​​ಗೆ​ ಡಿಕ್ಕಿ ಹೊಡೆದ ಪರಿಣಾಮ ನರ್ಸ್​ ಒಬ್ಬರು ಮೃತಪಟ್ಟಿರುವ ಘಟನೆ ದಾವಣೆಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನಲ್ಲಿ ನಡೆದಿದೆ.

ಮೃತರನ್ನು ಜಮಖಂಡಿ ಮೂಲದ ವಿಶ್ವನಾಥ್​ ಮನಗೂಳಿ(30) ಎಂದು ಗುರುತಿಸಲಾಗಿದ್ದು, ಶಿವಮೊಗ್ಗದಲ್ಲಿರುವ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿ ವಾಪಸ್​ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನಲೆ

ಜಮಖಂಡಿ ಮೂಲದ ವಿಶ್ವನಾಥ್​ ಮನಗೂಳಿ ಕಳೆದ ಮೂರುವರೆ ವರ್ಷಗಳಿಂದ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರೋಗಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಾರಣ ಅವರನ್ನು ಶಿವಮೊಗ್ಗದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಆಂಬುಲೆನ್ಸ್​ನಲ್ಲಿ ವಾಪಸ್​ ಆಗುತ್ತಿದ್ದರು.

Nurse Death

ರೋಗಿಯನ್ನು ಬಿಟ್ಟು ವಾಪಸ್​ ಆಗುವ ವೇಳೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸವಳಂಗ-ಶಿಕಾರಿಪುರ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಕ್ಯಾಂಟರ್​ಗೆ ಆಂಬುಲೆನ್ಸ್​​ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರ್ಸ್​ ವಿಶ್ವನಾಥ್​ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ​ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕ್ಯಾಂಟರ್​ ಹಾಗೂ ಅಂಬುಲೆನ್ಸ್​ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net