ಪದ್ಮನಾಭ ಮಾಣಿಂಜ ವ್ಯಕ್ತಿತ್ವ ಸಮಾಜಕ್ಕೆ ಆದರ್ಶ : ಕೆ.ತೇಜೋಮಯ ಹೇಳಿಕೆ ನುಡಿನಮನ

New Project (30)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪದ್ಮನಾಭ ಮಾಣಿಂಜರ ವ್ಯಕ್ತಿತ್ವ ಸಮಾಜಕ್ಕೆ ಆದರ್ಶಯುತವಾದುದು. ಅವರಿಂದ ಮೌಲ್ಯಯುತವಾದ ಸಮಾಜಸೇವೆ ಗುಣ ಕಲಿಯಬೇಕಾಗಿದೆ. ಅವರ ವಿಚಾರಧಾರೆ, ಕರ್ತವ್ಯನಿಷ್ಠೆ, ಸೇವಾ ಮನೋಭಾವ ಅನುಕರಣೀಯವಾದುದು ಎಂದು ಮೂಡ ಮಾಜಿ ಅಧ್ಯಕ್ಷ ಕೆ.ತೇಜೋಮಯ ಹೇಳಿದರು.

ಮಂಗಳವಾರ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೊರಗಪ್ಪ ಮೆಮೋರಿಯಲ್ ಹಾಲ್‌ನಲ್ಲಿ ದಿ.ಪದ್ಮನಾಭ ಮಾಣಿಂಜ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರ ಸಂಘ ಅಧ್ಯಕ್ಷ ಶ್ರೀಧರ ಜಿ.ಭಿಡೆ ಮಾತನಾಡಿ, ಪದ್ಮನಾಭರು ಬದುಕಿನ ಹಾದಿಯಲ್ಲಿ ಸಮಾಜಕ್ಕಾಗಿ ಶ್ರೇಷ್ಠ್ಠ ಕಾರ್ಯ ಮಾಡುತ್ತಾ ಬಂದವರು. ಅಧಿಕಾರದಲ್ಲಿರಬೇಕಾದ ಶಿಸ್ತನ್ನು ಆಡಳಿತದಲ್ಲೂ ಮುಂದವರಿಸಿ ಕಡೆಯವರೆಗೂ ಉಳಿಸಿಕೊಂಡವರು. ಬದುಕಿನ ಹಾದಿಯಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಮಾಣಿಂಜ ಅವರನ್ನು ಬದುಕಿನುದ್ದಕ್ಕೂ ನೆನಪಿಸಿಕೊಂಡು ಅನುಕರಿಸಬೇಕು ಎಂದರು.

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಮಾತನಾಡಿ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಇಂದು ಉನ್ನತ ಮಟ್ಟದಲ್ಲಿ ಬೆಳೆದು 25 ಶಾಖೆ ತೆರೆದು ನಿಲ್ಲುವಂತಾಗುವಲ್ಲಿ ಕಾರಣ ಪದ್ಮನಾಭರು. ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ವಿದ್ಯಾರ್ಥಿಗಳ, ಬಡ ವರ್ಗದ ಜನರ ಕಣ್ಣೀರೊರೆಸುವ ಸತ್ಕಾರ್ಯ ಮಾಡಿದವರು. ಗುರುದೇವ ಸಹಕಾರಿಯ ಕೇವಲ ಅಧ್ಯಕ್ಷರಾಗಿರದೆ ಶಕ್ತಿಯಾಗಿದ್ದರು ಎಂದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಉಪಾಧ್ಯಕ್ಷ ಭಗೀರಥ ಜಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹೇರಾಜೆ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎನ್‌ಎಂಪಿಟಿ ಮಾಜಿ ಟ್ರಸ್ಟಿ ಶೇಖರ ಪೂಜಾರಿ, ಬ್ಯಾಡ್ಮಿಂಟನ್ ಆಟಗಾರ ಅಶೋಕ್ ಪೂವಯ್ಯ, ಪ್ರಮುಖರಾದ ಜಯವಿಕ್ರಮ್ ಕಲ್ಲಾಪು, ಜನಾರ್ದನ ಪೂಜಾರಿ ಗೇರುಕಟ್ಟೆ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿರ್ದೇಶಕರು, ಸಿಇಒ ಅಶ್ವಥ್, ಸಿಬ್ಬಂದಿ, ಪದ್ಮನಾಭರ ಪತ್ನಿ ಇಂದಿರಾ ಪದ್ಮನಾಭ, ಪುತ್ರರಾದ ಸುಧೀರ್, ಸುಜಿತ್, ಸುರಾಜ್ ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು. ದೈನಿಕ ಠೇವಣಿ ಸಂಗ್ರಾಹಕ ವಿಶ್ವನಾಥ್ ನುಡಿನಮನ ಗೀತೆ ಹಾಡಿದರು. ಮಂಗಲ್ ದಾಸ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net