ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ

27a
Published on

ಹೊಳೆನರಸೀಪುರ: ಎನ್‌ಎಸ್‌ಎಸ್ ಶಿಬಿರಗಳು ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್ ತಿಳಿಸಿದರು.


ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರಗಳು ಶೈಕ್ಷಣಿಕ ಪ್ರಗತಿಗೆ ಪೂರಕ. ಶಿಬಿರಾರ್ಥಿಗಳು ಉತ್ತಮವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.


ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾಜ್ಯೋತಿ ಮಾತನಾಡಿ, ನಿರಂತರ ಆಸಕ್ತಿ ಉಳಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದರು.


ಅರಕಲಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಟಿ.ಪದ್ಮಾ ಮಾತನಾಡಿ, ವಿದ್ಯೆ ಕದಿಯಲಾರದ ಸಂಪತ್ತು. ಒಳ್ಳೆಯ ವಿದ್ಯಾವಂತರಾಗಿ ನಿಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.


ಬಿಎ, ಬಿಎಸ್ಸಿ ಹಾಗೂ ಬಿಸಿಎ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಶ್ವೇತಾ ನಾಯಕ್, ಪರಿಸರ ಸಂರಕ್ಷಣೆ ಘಟಕದ ಸಂಚಾಲಕ ಎಚ್.ಕೆ.ಅಶೋಕ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಗಣೇಶ್, ಐಕ್ಯೂಎಸಿ ಘಟಕದ ಸಂಚಾಲಕ ಡಾ.ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿದೇರ್ಶಕ ಎಂ.ಎಸ್.ಜಯಚಂದ್ರ, ರಾಸೇಯೋ ಕಾರ್ಯಕ್ರಮಾಧಿಕಾರಿ ಫಕೀರಮ್ಮ ಪಿ.ಮುರಗೋಡ, ಉಪನ್ಯಾಸಕಿ ಮಾಲಾ, ಎಚ್.ವಿ.ಸುರೇಶ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net