ಸ್ವಚ್ಛ ಗ್ರಾಮದಡೆಗೆ ಎನ್​ಎಸ್​ಎಸ್​ ನಡಿಗೆ; ಯಶಸ್ವಿಯಾಗಿ ಸಾಗುತ್ತಿದೆ ಎಸ್​ಡಿಎಂ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ

NSS
Published on

ಪರ್ಲಾಣಿ (ದ.ಕ): ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ತನ್ನ ಸುವರ್ಣೋತ್ಸವದಲ್ಲಿದ್ದು , 2022 -23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪರ್ಲಾಣಿಯಲ್ಲಿ ಆಯೋಜಿಸಿದೆ. ಏಳು ದಿನಗಳ ವಿಶೇಷ ಶಿಬಿರವು ಕಳೆದ ಗುರುವಾರ ಚಾಲನೆಗೊಂಡಿದೆ.

"ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ" ಎಂಬ ಧ್ಯೆಯ ವಾಕ್ಯದಡಿಯಲ್ಲಿ ಪ್ರಾರಂಭಗೊಂಡ ಈ ವಿಶೇಷ ಶಿಬಿರವನ್ನು ಚಾರ್ಮಾಡಿಯ ಪ್ರಗತಿಪರ ಕೃಷಿಕರಾದ ಶ್ರೀ ಅನಂತ ರಾವ್ ಮಠದ ಮಜಲು ಉದ್ಘಾಟಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಕಲ್ಪನೆ ಮತ್ತು ಸಾಕಾರ ಒಳ್ಳೆಯ ರೀತಿಯಲ್ಲಿ ಆಗುತ್ತಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ರೀತಿಯ ಯೋಚನೆಗಳು, ಯೋಜನೆಗಳು ಕ್ರಮಬದ್ಧವಾಗಿ ಆಗುತ್ತಿರಬೇಕು‌. ಇದಕ್ಕೆ ನಮ್ಮ ಊರಿನ ಸಹಕಾರ ಇದ್ದೇ ಇರುತ್ತದೆ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಪಿ .ವಿಶ್ವನಾಥ್, ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ ಎನ್ಎಸ್ಎಸ್ ನಮ್ಮ ದೇಶದ ಒಂದು ಅದ್ಭುತ ಯೋಜನೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜೀವನ ಶಿಕ್ಷಣ ಕಲಿಸುವ ಯೋಜನೆಯಾಗಿದೆ. ಎನ್ಎಸ್ಎಸ್ ಶಿಬಿರದಿಂದ ಈ ಶಾಲೆಯ ಮಕ್ಕಳ ವ್ಯಕ್ತಿತ್ವ ವಿಕಸನ ಆಗುವುದರೊಂದಿಗೆ ಊರಿನ ಜನರಿಗೂ ಉಪಯುಕ್ತವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಡಾ. ಬಿ. ಎ. ಕುಮಾರ ಹೆಗ್ಡೆ ಮಾತಾನಾಡಿ, ಈ ಶಿಬಿರದ ಏಳು ದಿನ ಜೀವನ ಪರ್ಯಂತ ನೆನಪಿಡಬೇಕಾದ್ದು. ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಕಾಯಕವೇ ಕೈಲಾಸ- ಶ್ರಮದ ಬೆಲೆ ಎಲ್ಲ ಸ್ವಯಂಸೇವಕರಿಗೆ ಅರ್ಥವಾಗಬೇಕು. ಅದೇ ಈ ಶಿಬಿರದ ಮೂಲ ಉದ್ದೇಶ ಎಂದರು.

ವಾರ್ಷಿಕ ವಿಶೇಷ ಶಿಬಿರದ ಯಶಸ್ಸಿನ ನಡುವೆ ಕಳೆದ ಏ. 1ರಂದು ಪರ್ಲಾಣಿ ಗ್ರಾಮದಲ್ಲಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪರ್ಲಾಣಿ ಶಾಲೆಯಿಂದ ಚಾರ್ಮಾಡಿ ಪೇಟೆಯವರೆಗೆ, ರಸ್ತೆಯಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ಬಾಟಲ್, ಬಟ್ಟೆ ಹಾಗೂ ಇನ್ನಿತರ ಕಸವನ್ನು 80ಕ್ಕೂ ಹೆಚ್ಚು ಸ್ವಯಂಸೇವಕರು ಸಂಗ್ರಹಿಸಿದ್ದಾರೆ. ಈ ಸ್ವಚ್ಛತಾ ಕಾರ್ಯದಲ್ಲಿ 28 ಚೀಲ ಕಸ ಸಂಗ್ರಹವಾಗಿದ್ದು, ಸ್ವಯಂಸೇವಕರ ಈ ಸೇವಾಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಗ್ರಹಿಸಿದ ಕಸವನ್ನು ಗ್ರಾಮ ಪಂಚಾಯತ್​ ಸುಪರ್ದಿಗೆ ವಹಿಸಲಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ.ಲಕ್ಷ್ಮಿ ನಾರಾಯಣ್ ಕೆ.ಎಸ್, ಪ್ರೊ. ದೀಪ ಆರ್.ಪಿ. ಹಿರಿಯ ಸ್ವಯಂಸೇವಕರಾದ ಪೃಥ್ವಿಶ್, ಧರ್ಮಶ್ರೀ ಅವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿದೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಸಿದ್ದರಾಮಯ್ಯ; ತಟ್ಟಿ ಎಬ್ಬಿಸಿದ ಡಿಕೆಶಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net