

ಹೊಳೆನರಸೀಪುರ: ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು (ಎನ್‌ಕ್ಯೂಎಎಸ್) ತಂಡದ ಸದಸ್ಯರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಿಂದ ಪಡುವಲಹಿಪ್ಪೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವು ಎನ್‌ಕ್ಯೂಎಎಸ್ ಸೌಲಭ್ಯಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ವಲಯ ವೈದ್ಯಕೀಯ ಅಧಿಕಾರಿ ಚೆನ್ನೈನ ಡಾ.ಎಸ್.ತುಳಸಿ, ರಾಜ್ಯ ಸಲಹೆಗಾರ ಗುಣ್ಣಮಟ್ಟದ ಭರವಸೆ ಅಧಿಕಾರಿ ತೆಲಂಗಾಣದ ಅಶೋಕ್ ಕುಮಾರ್ ಹಾಗೂ ತಂಡ ಪರಿಶೀಲನೆ ನಡೆಸಿ ಆಸ್ಪತ್ರೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನೀರಜಾ ಮಾತನಾಡಿ, ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳನ್ನು ಎಂಟು ವಿಭಾಗದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಸೇವಾ ನಿಬಂಧನೆ, ರೋಗಿಗಳ ಹಕ್ಕುಗಳು, ಒಳಹರಿವು(ರೋಗಿಗಳ ದಾಖಲಾತಿ), ಬೆಂಬಲ ಸೇವೆಗಳು, ಕ್ಲಿನಿಕಲ್ ಕೇರ್, ಸೋಂಕು ನಿಯಂತ್ರಣ, ಗುಣಮಟ್ಟ ನಿರ್ವಹಣೆ ಪ್ರಮುಖವಾಗಿದೆ. ಗುಣಮಟ್ಟದ ಸೇವೆ, ಸೋಂಕು ನಿಯಂತ್ರಣ, ದಾಖಲೆಗಳ ನಿರ್ವಹಣೆ ಮತ್ತು ಇತರ ಮಾನದಂಡಗಳನ್ನು ಪರಿಗಣಿಸಿ ತಂಡವು ವರದಿ ಸಲ್ಲಿಸುತ್ತದೆ. ಎನ್‌ಕ್ಯೂಎಎಸ್ ಪ್ರಮಾಣೀಕರಣವು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಸ್ಪತ್ರೆಗಳು ನಿರ್ವಹಿಸುವ ಉನ್ನತ ಗುಣಮಟ್ಟಕ್ಕೆ ಮನ್ನಣೆಯಾಗಿದೆ ಎಂದು ಹೇಳಿದರು.
ಡಾ.ಉಮಾಶೆಡ್ತಿ, ಡಾ.ನಿಶಿತಾ, ಕಚೇರಿ ಅಧೀಕ್ಷಕ ಪ್ರವೀಣ್ ಕುಮಾರ್, ಹಿರಿಯ ಪುರುಷ ಆರೋಗ್ಯ ಸಹಾಯಕ ರಾಮ್‌ಪ್ರಸಾದ್, ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕ ಲಕ್ಷ್ಮಣ್, ಸಿಬ್ಬಂದಿ ಇದ್ದರು.