15 ರಂದು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವೆ ಎಂದ ವಿಜಯೇಂದ್ರ

BVY_Mutt
Published on

ತುಮಕೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜಿಲ್ಲೆಯಲ್ಲಿನ ಮಿಂಚಿನ ಸಂಚಾರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತರಿಸಿದೆ. ಸಿದ್ದಗಂಗಾಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರನ್ನು ಕ್ಯಾತಸಂದ್ರ ಜಾಸ್‌ಟೋಲ್ ಬಳಿ ಅದ್ದೂರಿಯಾಗಿ ಕಾರ್ಯಕರ್ತರು ಬರಮಾಡಿಕೊಂಡರು. ಯುವ ನಾಯಕನ ಪರವಾಗಿ ಜಯಗೋಷಗಳು ಮೊಳಗಿದವು.

ಭಾನುವಾರ ಬೆಳಗ್ಗೆ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲಿಸಿದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ರಾಜಕೀಯ ವಿದ್ಯಮಾನಗಳ ಕುರಿತು ಅರ್ಧಗಂಟೆಗು ಹೆಚ್ಚು ಹೊತ್ತು ಚರ್ಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈವಿ, ಪೂಜ್ಯ ತಂದೆ ಬಿಎಸ್ ಯಡಿಯೂರಪ್ಪ ಅವರು ಯಾವ ಕೆಲಸಕ್ಕೂ ಮುನ್ನ ಅಥವಾ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ನಡೆದಾಡುವ ದೇವರು ಲಿಂಗೈಕ್ಯ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದು ಅಖಾಡಕ್ಕೆ ಇಳಿಯುತ್ತಿದ್ದರು. ಅದರಂತೆ ನಾನೂ ಕೂಡ ಮಠಕ್ಕೆ ಭೇಟಿಯಿತ್ತು ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ ಎಂದರು.

ನ.15 ರಂದು ಬೆಳಗ್ಗೆ 10ಕ್ಕೆ ಪಕ್ಷದ ಕಾರ್ಯಾಲಯದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸುವೆ. ಮರುದಿನ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಕ್ಷದ ಹಿರಿಯ ಮುಖಂಡರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸದಾನಂದ ಗೌಡ, ಗೋವಿಂದ ಕಾರಜೋಳ, ವಿ.ಸೋಮಣ್ಣ , ಬಸವನಗೌಡ ಪಾಟೀಲ್ ಯತ್ನಾಳ್ ಮೊದಲಾದ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡುವೆ. ಬೇರೆ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಬಹುತೇಕರು ಬರುವುದಿಲ್ಲ, ಪಕ್ಷದ ವೀಕ್ಷಕರು ಬರುತ್ತಾರೆ ಎಂದರು.

ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಇದಕ್ಕೆ ವೀಕ್ಷಕರು ಆಗಮಿಸಲಿದ್ದಾರೆ. ಪಕ್ಷದ ಸಭೆಯಲ್ಲಿ ಭೀಕರ ಬರ ನಿರ್ವಹಣೆ ಕುರಿತು ಚರ್ಚಿಸಿ, ಕಾರ್ಯೋನ್ಮುಖವಾಗಲಿದ್ದೇವೆ. ಬಿಜೆಪಿ ದೊಡ್ಡ ಪಕ್ಷ , ಸಣ್ಣ ಪುಟ್ಟ ವ್ಯತ್ಯಾಸಗಳಿರಲಿವೆ. ಆದರೂ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ. ಮಾಧುಸ್ವಾಮಿ ಕಾಲು ಪೆಟ್ಟಾಗಿರುವ ಹಿನ್ನೆಲೆ ಗೈರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿದರು.

ಕಾಂಗ್ರೆಸ್ ಪಕ್ಷಕ್ಕೆ ನನ್ನ ಮೇಲೆ ಪ್ರೀತಿ ಜಾಸ್ತಿ ಇರುವುದರಿಂದ ಸಲಹೆ ಕೊಡ್ತಾರೆ. ನಮ್ಮ ಪಕ್ಷದ ಹಿರಿಯರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಪಕ್ಷದಲ್ಲಿ ಯಾರನ್ನೂ ಸೈಡ್‌ಲೈನ್ ಮಾಡಿಲ್ಲ. ಮಾಡುವ ಪ್ರಶ್ನೆಯೂ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆ ಆಗಿರಬಹುದು ಆದರೆ, ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಸಿಗಲಿದೆ. ಇನ್ನೂ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಕೇಂದ್ರ ಮಟ್ಟದಲ್ಲಿ ಮಾತುಕತೆ ಆಗಿದೆ. ವಿಪಕ್ಷ ನಾಯಕನ ಆಯ್ಕೆ ನಂತರ ಲೋಕಸಭೆ ಟಿಕೆಟ್ ಚರ್ಚೆ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಎಸ್.ಆರ್.ವಿಶ್ವನಾಥ್, ಜಿ.ಬಿ.ಜ್ಯೋತಿಗಣೇಶ್, ಸಿ.ಕೆ.ರಾಮಮೂರ್ತಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ರಾಜ್ಯ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ಎಂ.ಬಿ.ನಂದೀಶ್, ಮಾಜಿ ಶಾಸಕರಾದ ಪ್ರೀತಂಗೌಡ, ಮಸಾಲಾ ಜಯರಾಂ, ಡಾ.ಸಿ.ಎಂ.ರಾಜೇಶ್‌ಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್, ಡಾ.ಎಸ್.ಪರಮೇಶ್, ಸ್ಫೂರ್ತಿ ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net