8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಡ್ರಗ್​​ಪೆಡ್ಲರ್ ಬೆಂಗಳೂರು ಪೊಲೀಸ್ ವಶಕ್ಕೆ

hameed
ಬಂಧಿತ ಹಮೀದ್​ ಮತ್ತು ಆತ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡ
Published on

ಬೆಂಗಳೂರು: ನೆರೆರಾಜ್ಯಗಳಿಂದ ಬೆಂಗಳೂರು ನಗರಕ್ಕೆ ಮಾದಕ ದ್ರವ್ಯಗಳನ್ನು ತಂದು ಮಾರಾಟ ಮಾಡಿಕೊಂಡು 8 ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಪೆಡ್ಲರನ್ನು ಕೆಂಗೇರಿ ಉಪವಿಭಾಗ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಳದ ಹಮೀದ್ (32) ಬಂಧಿತ ಆರೋಪಿ. ಈತನ ಬಂಧನದಿಂದ ತಾವರೆಕೆರೆ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರಕರಣ, ಬ್ಯಾಡರಹಳ್ಳಿಯ 9 ಪ್ರಕರಣ ಮತ್ತು ವಿಜಯನಗರ ಠಾಣೆಯ 1 ಪ್ರಕರಣ ಬೆಳಕಿಗೆ ಬಂದಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.

ಆರೋಪಿಯು ತಮಿಳುನಾಡು, ಆಂಧ್ರಪ್ರದೇಶಗಳಿಂದ ಗಾಂಜಾ ತಂದು ಉಲ್ಲಾಳದಲ್ಲಿ ಗೋದಾಮು ಮಾಡಿಕೊಂಡು ಅಲ್ಲಿಂದ ಸಬ್ ಪೆಡ್ಲರ್‌ಗಳ ಮೂಲಕ ಸುತ್ತಲ ಪ್ರದೇಶ ಮತ್ತು ನಗರದ ವಿವಿಧೆಡೆ ಯುವಕರಿಗೆ ಡ್ರಗ್ಸ್​​ ಪೂರೈಕೆ ಮಾಡುತ್ತಿದ್ದ. ಅಲ್ಲದೆ, ಉಲ್ಲಾಳದಲ್ಲಿ ಪುಡಿರೌಡಿಗಳ ಮೂಲಕ ಸ್ಥಳೀಯರಿಗೆ ಬೆದರಿಸಿ ಹವಾ ಎಬ್ಬಿಸಿದ್ದ. ಈ ಬಗ್ಗೆ ಜಾಲತಾಣದಲ್ಲಿ ಸ್ಥಳೀಯರು ರೌಡಿಗಳ ಮತ್ತು ಗಾಂಜಾ ಹಾವಳಿ ಕುರಿತು ದೂರು ನೀಡಿದ್ದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಉಲ್ಲಾಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಕೆಂಗೇರಿ ಉಪ ವಿಭಾಗ ಎಸಿಪಿ ಕೃಷ್ಣಕುಮಾರ್, ಜ್ಞಾನಭಾರತಿ ಇನ್‌ಸ್ಪೆಕ್ಟರ್ ಲಕ್ಷ್ಮಣ್ ನಾಯಕ್, ಅನ್ನಪೂಣೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್ ಲೋಹಿತ್, ಪಿಎಸ್‌ಐ ಸಂಗನಬಸಪ್ಪ ನೇತೃತ್ವದ ತಂಡ ರಚಿಸಲಾಗಿತ್ತು. ಎಂಟು ತಿಂಗಳಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜಾಲಾಡಿ, ಇದೀಗ ಖಚಿತ ಮಾಹಿತಿಯ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಹಮೀದ್​ನೊಂದಿಗೆ ಆತನ ಸಹೋದರ ಸಯೀದ್ (30) ಎಂಬ ಆರೋಪಿಯನ್ನೂ ಬಂಧಿಸಲಾಗಿದೆ. ಉಲ್ಲಾಳದಲ್ಲಿ ಇರುವ ಬಿಬಿಎಂಪಿ ಕಟ್ಟಡದಲ್ಲಿ ಪೊಲೀಸ್ ಚೌಕಿ ತೆರೆಯಲಾಗಿದೆ. ಹಮೀದ್‌ಗೆ ಸಾಥ್ ಕೊಟ್ಟಿದ್ದ ಹೊರರಾಜ್ಯದ ಅಪರಾಧ ಹಿನ್ನೆಲೆಯುಳ್ಳವರು ಜಾಗ ಖಾಲಿ ಮಾಡಿದ್ದಾರೆ. ಗಸ್ತು ಸಹ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ನಿರ್ಮಾಣ: ವಿಶ್ವೇಶ್ವರಯ್ಯ ಲೇಔಟ್ 6ನೇ ಹಂತದಲ್ಲಿ ಸೈಟ್ ಖರೀದಿಸಿ ಹಮ್ಮೀದ್ 3 ಅಂತಸ್ತಿನ ಹೊಸ ಮನೆ ನಿರ್ಮಾಣ ಮಾಡುತ್ತಿದ್ದ. ಮಾದಕ ದ್ರವ್ಯ ಮಾರಾಟ ಮತ್ತು ಸ್ಥಳೀಯರಿಗೆ ಬೆದರಿಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡಿ ಮನೆ ಕಟ್ಟುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net