ದೌರ್ಜನ್ಯ ಪ್ರಕರಣಗಳ ತ್ವರಿತ ಎಫ್​ಐಆರ್​ಗೆ ಸೂಚನೆ

28-hvr-01
Published on

ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತವಾಗಿ ಎಫ್​ಐಆರ್ ದಾಖಲಿಸಿ ವರದಿ ಸಲ್ಲಿಸಲು ಠಾಣಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗ್ರತ ಸಮಿತಿ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಎಫ್​ಐಆರ್ ಜೊತೆಗೆ ನಿಗದಿತ ಅವಧಿಯಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಬೇಕು. ಈ ಕುರಿತು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ತಡವಾದರೆ ನೊಂದವರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿಶೇಷ ಕಾಯ್ದೆ ಹಾಗೂ ಈ ವರ್ಗಗಳ ಪ್ರಕರಣಗಳ ನಿರ್ವಹಣೆಯಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಎಲ್ಲ ಪೊಲೀಸ್ ಠಾಣಾಧಿಕಾರಿಗಳಿಗೆ ಪುನರ್ ಮನನ ಕಾರ್ಯಾಗಾರ ಆಯೋಜಿಸುವಂತೆ ಸಲಹೆ ನೀಡಿದರು.

128 ಪ್ರಕರಣ ಬಾಕಿ: ಜಿಲ್ಲಾ ನ್ಯಾಯಾಲಯದ ವಿಚಾರಣೆಯಲ್ಲಿರುವ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ದೌರ್ಜನ್ಯ ತಡೆ ನಿಯಮಗಳ ಹಾಗೂ ಅಧಿನಿಯಮದಡಿ ದಾಖಲಿಸಲ್ಪಟ್ಟ ಪ್ರಕರಣಗಳ ಮಾಹಿತಿ ಪಡೆದರು. 2010ರಿಂದ 2019ರವರೆಗೆ 114 ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ಜನವರಿ 1ರಿಂದ ಜುಲೈ ಕೊನೆಯವರೆಗೆ 18 ಪ್ರಕರಣಗಳು ಸೇರಿ 132 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4 ಪ್ರಕರಣಗಳು ಮುಕ್ತವಾಗಿದ್ದು, 128 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ವಿವಿಧ ಹಂತದಲ್ಲಿ ಬಾಕಿ ಉಳಿದಿವೆ. ದೌರ್ಜನ್ಯ ಪ್ರಕರಣಗಳಲ್ಲಿ 2018ರಿಂದ 2020ರವರೆಗೆ 78 ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣಗಳಲ್ಲಿ ಈವರೆಗೆ 108 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕರು, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ಎರಡು ದಿನದಲ್ಲಿ ವರದಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್​ಗಳ ಮರು ಸಮೀಕ್ಷೆ ಪೂರ್ಣಗೊಂಡಿದ್ದು, ಎರಡು ದಿನದೊಳಗೆ ವರದಿ ಸಲ್ಲಿಸಬೇಕು. ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್​ಗಳ ಎರಡನೇ ಹಂತದ ಸಮೀಕ್ಷೆಯನ್ನು ಪೂರ್ಣಗೊಳಿಸಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವರದಿಗಳನ್ನು ಎರಡು ದಿನದಲ್ಲಿ ಇತ್ಯರ್ಥಪಡಿಸಿ ಸಲ್ಲಿಸಬೇಕು ಎಂದು ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಎಸಿಗಳಾದ ಡಾ. ದಿಲೀಪ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಜಿಲ್ಲಾ ದೌರ್ಜನ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ನಿಯಮಾವಳಿ ಅನುಸಾರ ಭರ್ತಿ ಮಾಡಲು ಕ್ರಮವಹಿಸಬೇಕು. ಸಫಾಯಿ ಕರ್ಮಚಾರಿಗಳ ಕುಟುಂಬ ವರ್ಗದವರನ್ನು ಖಚಿತವಾಗಿ ಗುರುತಿಸಿ ಅವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ಕ್ರಮವಹಿಸಬೇಕು.| ನೆಹರು ಓಲೇಕಾರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net