ಬೆಳೆ ವಿಮೆ ನೋಂದಣಿಗೆ ಸೂಚನೆ

5-hvr-01
Published on

ಹಾವೇರಿ: ಪ್ರಸಕ್ತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಕಾಲಾವಧಿಯಲ್ಲಿ ಬೆಳೆ ವಿಮೆ ತುಂಬಲು ಅನುಕೂಲವಾಗುವಂತೆ ಪ್ರಚಾರ ಕೈಗೊಳ್ಳಬೇಕು ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೆಳೆ ವಿಮೆ ನೋಂದಣಿ ಕುರಿತು ಅಧಿಕಾರಿಗಳ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳನ್ನು ಬಿಡುಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 14 ಬೆಳೆಗಳು ಹಾಗೂ ಬೇಸಿಗೆಗೆ 3 ಬೆಳೆಗಳನ್ನು ವಿಮೆಗೆ ಅಧಿಸೂಚಿಸಲಾಗಿದೆ. ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಯಾವ ಯಾವ ಬೆಳೆಗೆ ವಿಮೆ ನೋಂದಣಿಗೆ ಅವಕಾಶವಿದೆ. ಯಾವ ದಿನಾಂಕಕ್ಕೆ ಯಾವ ಬೆಳೆ ನೋಂದಾಯಿಸಲು ಕೊನೆಯ ದಿನಾಂಕ, ಹೋಬಳಿ ಮತ್ತು ಗ್ರಾಪಂವಾರು ಯಾವ ಯಾವ ಬೆಳೆಯನ್ನು ಅಧಿಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಎಲ್ಲ ರೈತರಿಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ವಿಮಾ ಕಂಪನಿಗಳು ಕೃಷಿ, ತೋಟಗಾರಿಕೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಹಿಂಗಾರು ಹಾಗೂ ಬೇಸಿಗೆ ಬೆಳೆ ವಿಮೆ ನೋಂದಣಿ ಕುರಿತು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹೆಕ್ಟೇರ್​ನಷ್ಟು ಬೆಳೆಯಿದೆ. ಈ ವರ್ಷ ಸಾಲ ಮಾಡಿದ ರೈತರು ನೋಂದಣಿ ಮಾಡುವುದು ಐಚ್ಚಿಕವಾಗಿದೆ. ಕಡ್ಡಾಯವಿಲ್ಲ. ವಿಮಾ ನೋಂದಣಿಗೆ ಅಗ್ರಿಕಲ್ಚರ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಸಂಸ್ಥೆಯು ವಿಮೆಯಲ್ಲಿ ಪಾಲ್ಗೊಳ್ಳುತ್ತಿದೆ. ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಪಂ ಮಟ್ಟ ಮತ್ತು ಗ್ರಾಪಂ ವ್ಯಾಪ್ತಿಯಿಂದ ಹೊರಗಿರುವ ಪಟ್ಟಣ, ನಗರ, ವ್ಯಾಪ್ತಿಗೆ ಬರುವ ಗ್ರಾಮಗಳು ಸೇರಿದಂತೆ ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಟಾನಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.

ವಿಮೆ ಕುರಿತಂತೆ ರೈತರಿಗೆ ಮಾಹಿತಿ ಒದಗಿಸಲು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶರ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಹಿಂಗಾರು ಹಂಗಾಮಿಗೆ ನೀರಾವರಿ ಜೋಳ, ಈರುಳ್ಳಿ ಹಾಗೂ ಮಳೆಯಾಶ್ರಿತ ಜೋಳ, ಕುಸಬೆ, ಸೂರ್ಯಕಾಂತಿ, ಟೊಮ್ಯಾಟೋ ಬೆಳೆಗಳ ವಿಮೆ ಕಂತು ತುಂಬಲು ನ. 30ಕೊನೆಯ ದಿನಾಂಕವಾಗಿದೆ. ಮಳೆಯಾಶ್ರಿತ ಕಡಲೆ, ಗೋಧಿ ಹಾಗೂ ನೀರಾವರಿ ಸೂರ್ಯಕಾಂತಿ, ಕಡಲೆ ಬೆಳೆಗೆ ವಿಮೆ ಕಂತು ತುಂಬಲು ಡಿ. 16, ಮಳೆಯಾಶ್ರಿತ ಉದ್ದು, ಹೆಸರು, ಹುರುಳಿ, ನೀರಾವರಿ ಮೆಕ್ಕೆಜೋಳದ ಬೆಳೆ ವಿಮೆ ಕಂತು ತುಂಬಲು ಡಿ. 31, ಬೇಸಿಗೆ ಹಂಗಾಮಿಗೆ ನೀರಾವರಿ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿಗೆ ವಿಮೆ ಕಂತು ತುಂಬಲು 2021 ಮಾ. 1 ಕೊನೆಯ ದಿನವಾಗಿದೆ ಎಂದರು.

ತೋಟಗಾರಿಕೆ ಉಪನಿರ್ದೇಶಕ ಡಾ. ಎಲ್. ಪ್ರದೀಪ ಮಾತನಾಡಿ, ರೈತರು ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ವಿಮೆ ನೋಂದಣಿ ಮಾಡಿಕೊಳ್ಳಲು ಈಗಾಗಲೇ ಪ್ರಚಾರ ನಡೆಸಲಾಗಿದೆ ಎಂದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಎನ್.ಜಿ. ಪ್ರಭುದೇವ, ಜಿಪಂ ಯೋಜನಾ ನಿರ್ದೇಶಕ ಕುಮಾರ ಮಣ್ಣವಡ್ಡರ, ಕೃಷಿ ಇಲಾಖೆ ಉಪನಿರ್ದೇಶಕರಾದ ಕೆ. ಕರಿಯಲ್ಲಪ್ಪ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎಚ್.ವೈ. ಮೀಶೆ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ವಿಮಾ ಕಂಪನಿಯ ಪ್ರತಿನಿಧಿಗಳು, ವಿವಿಧ ಕೃಷಿ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net