ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

FotoJet 11111
Published on

ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ನಿರ್ದೇಶನ

ಮಾಗಡಿ:ಗೋ ಕಟ್ಟೆಯಲ್ಲಿ ನಿರ್ಮಿಸಿರುವ ಸಾಯಿಬಾಬಾ ದೇವಾಲಯವನ್ನು ಕೂಡಲೇ ತೆರವುಗೊಳಿಸಿ ಸುಸಜ್ಜಿತ ಗೋಕಟ್ಟೆ ನಿರ್ಮಿಸುವಂತೆ ಶಾಸಕ ಎಸ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ನಟರಾಜ ಬಡಾವಣೆ ಮನೆಗಳಿಗೆ ಮಳೆ ನೀರು ಹಾಗೂ ಶೌಚಗುಂಡಿ ನೀರು ನುಗ್ಗುತ್ತಿರುವ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಶಾಸಕ ಬಾಲಕೃಷ್ಣ, ಗುರುವಾರ ಅಧಿಕಾರಿಗಳೊಂದಿಗೆ ಬಡಾವಣೆಗೆ ಭೇಟಿ ನೀಡಿ, ಪರಿಶೀಲಿಸಿ, ಬಡಾವಣೆಯಲ್ಲಿ ಏನೆಲ್ಲ ಸಮಸ್ಯೆಗಳಿವೆ ಎಂಬುದರ ಬಗ್ಗೆ ಎರಡು ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದು, ವರದಿ ಬಂದ ತಕ್ಷಣ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜೀವಿಪಾಳ್ಯದಿಂದ ಪಿಸಿ ಪಾಳ್ಯದವರೆಗೆ ರಾಜಕಾಲುವೆ ಇದ್ದು, ಕೆಲವೆಡೆ ಒತ್ತುವರಿಯಾಗಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. ಕೆಲವೆಡೆ ಶೌಚದ ಗುಂಡಿಗಳು ತುಂಬಿ ಹರಿಯುವ ಕಾರಣ ನಟರಾಜ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇನ್ನು ಪಟ್ಟಣದ ಎನ್‌ಇಎಸ್ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಹಿನ್ನೆಲೆ ಇಲ್ಲಿನ ಸೇತುವೆ ನಿರ್ಮಾಣದ ವೇಳೆ ರಾಜಕಾಲುವೆ ಬಳಿ ಮಣ್ಣು ಸುರಿದಿರುವುದರಿಂದ ಸಮಸ್ಯೆಯಾಗಿದೆ.

ಕೂಡಲೇ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ, ಬೃಹತ್ ಗಾತ್ರದ ಚರಂಡಿ ನಿರ್ಮಿಸಿ, ಮಳೆನೀರು ಸುಗಮವಾಗಿ ಹರಿಯಲು ಕ್ರಮ ಕೈಗೊಳ್ಳಲಾಗುವುದು.ರಸ್ತೆ ಅಭಿವೃದ್ಧಿಯಿಂದ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಹಾಗಾಗಿ ನಿವಾಸಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಪ್ರಭಾರ ಅಧ್ಯಕ್ಷ ರಿಯಾಜ್ ಅಹಮದ್, ಸ್ಥಾಯಿಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ನಾಗರತ್ನಮ್ಮ, ರಮೇಶ್, ಮಮತಾ, ಬಿಎಂಆರ್‌ಡಿಎ ನಿರ್ದೇಶಕ ತೇಜಮೂರ್ತಿ, ಅಶ್ವತ್ಥ, ಡೋಲಾ ರಂಗನಾಥ್, ಪಿಎಪಿಸಿಎಂಎಸ್ ನಿರ್ದೇಶಕ ಎಂ.ರವೀಶ್, ಮುಖ್ಯಾಧಿಕಾರಿ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ಶಿವಕುಮಾರ್, ಲೋಕಉಪಯೋಗಿ ಇಲಾಖೆ ಇಂಜಿನಿಯರ್ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net