ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ
Published on

ಹಾಸನ: ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಚುನಾವಣಾ ವೇಳೆ ಆಸ್ತಿ ವಿವರಗಳನ್ನು ಮುಚ್ಚಿಟ್ಟ ಆರೋಪದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸಂಸದರ ಕಚೇರಿಗೆ ನೋಟಿಸ್ ಅಂಟಿಸಲಾಗಿದೆ. ಡಿಸಿ ಕಚೇರಿ ಕಟ್ಟಡದಲ್ಲಿರುವ ಸಂಸದರ ಕಚೇರಿಗೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ವಕೀಲ ಪೂರ್ಣಚಂದ್ರ ತೇಜಸ್ವಿ ನೋಟಿಸ್ ಅಂಟಿಸಿದರು. ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಶ್ರೇಯಸ್ ಪಟೇಲ್ ವಿರುದ್ಧದ ಆರೋಪದಂತೆ, ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ತಮ್ಮ ತಾತ ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಗೌಡರ ಹೆಸರಿನಲ್ಲಿ ಹೊಂದಿದ್ದರೂ ಚುನಾವಣಾ ವೇಳೆ ಆಸ್ತಿ ವಿವರಗಳನ್ನು ಬಚ್ಚಿಟ್ಟಿದ್ದರು. ಈ ಪ್ರಕರಣದಲ್ಲಿ ಶ್ರೇಯಸ್ ಪಟೇಲ್ ಆ ಆಸ್ತಿಗೆ ತೆರಿಗೆ ಕಟ್ಟಿರುವ ದಾಖಲೆಗಳನ್ನು ಜೆಡಿಎಸ್ ಪಕ್ಷ ಕಾನೂನು ಹೋರಾಟಕ್ಕೆ ಆಧಾರವನ್ನಾಗಿ ಮಾಡಿಕೊಂಡಿದೆ. ಇದೇ ರೀತಿಯ ಆಸ್ತಿ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ಕಳೆದುಕೊಂಡಿದ್ದರು.

ಹೈಕೋರ್ಟ್‌ನಲ್ಲಿ ಮೊದಲು ದಾಖಲಾಗಿದ್ದ ದೂರು ವಜಾಗೊಂಡಿದ್ದರಿಂದ ಜೆಡಿಎಸ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ದೂರು ಸ್ವೀಕರಿಸಿದ ಸುಪ್ರೀಂಕೋರ್ಟ್ ಈಗ ವಿಚಾರಣೆಗೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net