ಜನ, ಜಾನುವಾರಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ

st somashekar
Published on


ವಿಜಯವಾಣಿ ಸುದ್ದಿಜಾಲ ಮೈಸೂರು
ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ಪಾತ್ರದ ಜನರ ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಳೆದ 2-3 ದಿನಗಳಿಂದ ರಾಜ್ಯ ಹಾಗೂ ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುವ ಸೂಚನೆಗಳನ್ನು ನೀಡುತ್ತಿವೆ. ಆದ್ದರಿಂದ ಮೈಸೂರು ಜಿಲ್ಲೆಯ ಜಲಾಶಯಗಳ ಒಳಹರಿವು ಸಹ ಹೆಚ್ಚಳಗೊಂಡಿದೆ. ಈಗಾಗಲೇ ಜಲಾಶಯಗಳಿಂದ ಅತಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಕೆಲ ಕಡೆ ಸೇತುವೆಗಳು ನೀರಿನಿಂದ ಆವೃತವಾಗುವ ಸಾಧ್ಯತೆ ಇದ್ದು, ರಸ್ತೆ ಸಂಪರ್ಕಗಳು ಸಹ ಸಂಪೂರ್ಣ ಕಡಿತಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿ ಅಂತಹ ಸೂಕ್ಷ್ಮ ಪ್ರದೇಶಗಳತ್ತ ಗಮನ ಹರಿಸಬೇಕಿದೆ. ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.
ನದಿ ದಂಡೆ ಪ್ರದೇಶಗಳಲ್ಲಿ ಬರುವ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಲ್ಲದೆ, ಜಲಾಶಯಗಳಿಗೆ ನೀರು ಬಿಡುವ ಮುಂಚಿತವಾಗಿ ನದಿ ಪಾತ್ರದ ನಾಗರಿಕರಿಗೆ ಮಾಹಿತಿ ನೀಡಿ ಬೇರೆಡೆ ಸ್ಥಳಾಂತರಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಅಗತ್ಯವಿದ್ದರೆ ಪರಿಹಾರ ಕೇಂದ್ರಗಳನ್ನು ತೆರೆಯುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಧಾವಿಸಬೇಕು ಎಂದು ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಜತೆಗೆ ಸೂಕ್ತ ವೈದ್ಯಕೀಯ ಸೇವೆಯನ್ನು ನೀಡಲು ಸಜ್ಜಾಗಬೇಕು. ಅಲ್ಲದೆ, ಬೆಳೆ ನಾಶ, ಆಸ್ತಿ-ಪಾಸ್ತಿ ಹಾನಿ, ಜೀವಹಾನಿ, ಪ್ರವಾಹ ಸಂಬಂಧಿ ಅವಘಡಗಳಿಗೆ ಸಂಬಂಧಿಸಿದಂತೆ ತ್ವರಿತ ಪರಿಹಾರ ನೀಡಲು ಕ್ರಮವಹಿಸಬೇಕು. ಕಂದಾಯ ಮತ್ತು ನೀರಾವರಿ ಸೇರಿ ಇನ್ನಿತರ ಅಗತ್ಯ ಸೇವೆಗಳ ಇಲಾಖೆಗಳ ಅಧಿಕಾರಿಗಳು ದಿನದ 24 ಗಂಟೆ ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net