

ಗಂಗೊಳ್ಳಿ: ನದಿ ಹಾಗೂ ಕಡಲ ಮಧ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಸನಿಹವೇ ಇರುವ ತ್ರಾಸಿ- ಮರವಂತೆಯ ಬೀಚ್ನ ಅತ್ಯಪೂರ್ವ ಸೊಬಗನ್ನು ಕಣ್ತುಂಬಿಕೊಳ್ಳಲು ದೂರ ದೂರದ ಊರುಗಳಿಂದ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಆದರೆ ಇಲ್ಲಿ ಕೆಲದಿನಗಳಿಂದ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಇದರ ಮಧ್ಯೆಯೂ ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರವಾಸಿಗರ ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ, ನೀರಿಗಿಳಿದು ವಿಹಾರಿಸುತ್ತಿರುವುದು ಕಂಡುಬಂದಿದೆ.
ಇಲ್ಲಿನ ಕಡಲ ತೀರದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಗೃಹ ರಕ್ಷಕದ ದಳದವರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ನೇಹಿತರು, ಸಂಬಂಧಿಕರೊಂದಿಗೆ ಮೈಮರೆತು ಅಪಾಯ ಲೆಕ್ಕಿಸದೇ ನೀರಿಗಿಳಿಯುತ್ತಿದ್ದು, ಸಮುದ್ರದ ನೀರಿಗೆ ಇಳಿಯದಂತೆ, ತಡೆಗೋಡೆಯ ಕಲ್ಲಿನ ಮೇಲೆ ನಿಲ್ಲದಂತೆ ಗಂಗೊಳ್ಳಿ ಪೊಲೀಸರು ರಿಬ್ಬನ್ ಅಳವಡಿಸಿ ಸೂಚನಾ ಫಲಕ ಹಾಕಿದ್ದರೂ ಪ್ರವಾಸಿಗರು ಕ್ಯಾರೇ ಮಾಡುತ್ತಿಲ್ಲ. ಬೀಚ್ನಲ್ಲಿ ಗಸ್ತು ತಿರುಗುತ್ತಿರುವ ಸಿಬ್ಬಂದಿ ಮಾತನ್ನೂ ಕೇಳುತ್ತಿಲ್ಲ. ಇಲ್ಲಿ ಈಗ ಯಾರೂ ಕೂಡ ಕೇಳುವವರೇ ಇಲ್ಲದಂತಾಗಿದೆ. ದಡದಿಂದ 90 ಮೀ. ಉದ್ದಕ್ಕಿರುವ ತಡೆಗೋಡೆ ಮೇಲೆ ನಿಲ್ಲುವುದು, ಸ್ನಾನ ಮಾಡುವುದು ಹಾಗೂ ಫೋಟೋ ತೆಗೆದುಕೊಳ್ಳುವುದು ಅಪಾಯಕಾರಿ. ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇದರ ಅಬ್ಬರ ಅಂದಾಜಿಸುವುದು ಕೂಡ ಕಷ್ಟ.
ಮಳೆಗಾಲದಲ್ಲಿ ಸಂಭಾವ್ಯ ಅನಾಹುತ ತಡೆಯುವ ನಿಟ್ಟಿನಲ್ಲಿ ಸಮುದ್ರದ ನೀರಿಗಿಳಿಯದಂತೆ, ತಡೆಗೋಡೆ ಹಾಗೂ ಕಲ್ಲಿನ ಮೇಲೆ ನಿಲ್ಲದಂತೆ ಸೂಚನಾ ಫಲಕ ಹಾಕಲಾಗಿದೆ. ರಿಬ್ಬನ್ ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಬೀಚ್ನಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಸಿಬ್ಬಂದಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಹಾಗೂ ಸಮುದ್ರದ ನೀರಿಗೆ ಇಳಿಯದಂತೆ ಸೂಚನೆ ನೀಡುತ್ತಿದ್ದಾರೆ.-ಹರೀಶ್ ಆರ್., ಗಂಗೊಳ್ಳಿ ಠಾಣೆ ಪೊಲೀಸ್ ಉಪನಿರೀಕ್ಷಕ