ಸಂಘಟನೆಗಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ: ಡಾ.ಭರತ್ ಶೆಟ್ಟಿ ಅನಿಸಿಕೆ

Gur_Sangatane
Published on

ಗುರುಪುರ: ಸಂಘಟನೆಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ಗೃಹ ಕಾರ್ಮಿಕರು ಒಗ್ಗೂಡಿರುವುದು ಉತ್ತಮ ಬೆಳವಣಿಗೆ. ಇಂಥ ಕಾರ್ಯಕ್ರಮದಲ್ಲಿ ಇದೇ ಪ್ರಥಮ ಬಾರಿಗೆ ನಾನು ಪಾಲ್ಗೊಳ್ಳುತ್ತಿದ್ದೇನೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಕುಂಜತ್ತಬೈಲಿನ ಎಚ್‌ಎಂಸಿ ಮೈದಾನದಲ್ಲಿ ಸೋಮವಾರ ಮಂಗಳೂರಿನ ಸ್ತ್ರೀ ಜಾಗೃತಿ ಸಮಿತಿ ಮತ್ತು ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ 13ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ‘ಹೊಸ ಬೆಳಕು’ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಕಾರ್ಯದರ್ಶಿ ಗೀತಾ ಮೆನನ್ ಮಾತನಾಡಿ, ಸರ್ಕಾರ ಗೃಹ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡಿಲ್ಲ. ಅಧಿವೇಶನದಲ್ಲಿ ಗೃಹ ಕಾರ್ಮಿಕರ ಬಗ್ಗೆ ಚರ್ಚೆಯಾಗಬೇಕು. ಮಂಗಳೂರು ಬೆಂಗಳೂರು ಬೆಳಗಾವಿಯಲ್ಲಿ ಗೃಹ ಕಾರ್ಮಿಕರ ಸಂಘಟನೆ ರಚಿಸುವಲ್ಲಿ ಯಶಸ್ವಿಯಾಗಿದ್ದೇವೆ. ದೇಶಾದ್ಯಂತ ಸಂಘಟನೆ ರಚಿಸಿ ಗೃಹ ಕಾರ್ಮಿಕರ ಹೋರಾಟ ನಡೆಸಲಿದ್ದೇವೆ ಎಂದರು.

ಮನಪಾ ಮಾಜಿ ಮೇಯರ್ ಸುನಂದಾ ಬೋಳೂರು ಅವರಿಗೆ ‘ಹೊಸಬೆಳಕು ಪ್ರಶಸ್ತಿ-2024’ ಪ್ರದಾನಿಸಲಾಯಿತು. ಮನಪಾ ಕಾರ್ಪೊರೇಟರ್ ಶರತ್ ಕುಮಾರ್, ಕಾವೂರು ಪೊಲೀಸ್ ಠಾಣಾಧಿಕಾರಿ ನಳಿನಾಕ್ಷಿ, ದ.ಕ. ಉಪ ವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ, ಶಿಶು ಮತ್ತು ಮಹಿಳಾ ಯೋಜನಾಧಿಕಾರಿ ಶ್ವೇತಾ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ ಆರ್.ಕೋಟ್ಯಾನ್, ಗೀತಾ ಎಸ್.ಕುಂಜತ್ತಬೈಲ್, ನಂದಾ ಪಾಯಸ್, ಶಿಕ್ಷಕಿ ಸಿಸ್ಟರ್ ವಿಜಯಾ ಕ್ರಾಸ್ತ, ಡಾ.ಧೃತಿ, ರಹಮಾನ್ ಖಾನ್ ಕುಂಜತ್ತಬೈಲ್, ಡಾ.ಸಂಸಾದ್ ಕುಂಜತ್ತಬೈಲ್, ಅಧ್ಯಕ್ಷೆ ಸೀತಮ್ಮ, ಕಾರ್ಯದರ್ಶಿ ಕವಿತಾ ಎಸ್.ಉಪಸ್ಥಿತರಿದ್ದರು.

ಹನಿಷಾ ಸವಾದ್ ಮತ್ತು ಶಿವಪ್ರಸಾದ್ ಕುಡ್ಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net