ಯಾವುದೇ ಉತ್ಸವಗಳಲ್ಲಿ ಭಾಗಿಯಾಗಲ್ಲ

Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ದೇಗುಲದ ಇಒ ಹಾಗೂ ತಹಸೀಲ್ದಾರ್ ಎಂ.ಮಮತಾ, ಅಡ್ಡೆಗಾರರಿಗೆ ನೋಟಿಸ್ ನೀಡಿ, ಸ್ವಾಭಿಮಾನಕ್ಕೆ ಧಕ್ಕೆ ತಂದಿರುವುದರಿಂದ ನಾವು ಇನ್ನು ಮುಂದೆ ದೇವರ ಅಡ್ಡೆ ಹೊರುವುದಿಲ್ಲ ಎಂದು ಶ್ರೀ ಚನ್ನಕೇಶವಸ್ವಾಮಿ ದೇಗುಲದ ಅಡ್ಡೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.

ವೇದಾಂತ ದೇಶಿಕರ ತಿರು ನಕ್ಷತ್ರ ಉತ್ಸವವನ್ನು ಹಿಂದಿನಿಂದಿಲೂ ನಡೆಸುತ್ತಿದ್ದ ಸೇವಾರ್ಥದಾರರು 2021ರಿಂದ ಈಚೆಗೆ ಸರಿಯಾಗಿ ನಡೆಸುತ್ತಿರಲಿಲ್ಲ. ಚಲನ್ ಕಟ್ಟಿದ್ದರೂ ಉತ್ಸವಕ್ಕೆ ಬರುತ್ತಿರಲಿಲ್ಲ. ಆದ್ದರಿಂದ ಈ ಉತ್ಸವ ನಡೆಸದಂತೆ ದೇಗುಲದ ಅರ್ಚಕರು, ಅಡ್ಡೆಗಾರರು ಈ ಹಿಂದಿನ ಇಒ ಅವರೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಂಡಿದ್ದೆವು. ಆದರೆ ಇದೇ ಸೆ.25 ಕ್ಕೆ ಉತ್ಸವ ನಡೆಸಲು ಸೇವಾರ್ಥದಾರರು ಚಲನ್ ಕಟ್ಟಿದ್ದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದರಿಂದ ದೇಗುಲದ ಇಒ ಹಾಗೂ ತಹಸೀಲ್ದಾರ್ ಎಂ.ಮಮತಾ, ಉತ್ಸವ ನಡೆಸಲು ಅಡ್ಡೆಗಾರರು ಬಾರದಿದ್ದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ನಮ್ಮೆಲ್ಲ ಅಡ್ಡೆಗಾರರಿಗೆ ನೋಟಿಸ್ ನೀಡಿರುವುದನ್ನು ಖಂಡಿಸುತ್ತೇವೆ. ನಮ್ಮ ವಂಶಸ್ಥರ ಕಾಲದಿಂದಲೂ ವಂಶಪಾರಂಪರ್ಯವಾಗಿ ದೇವರ ಸೇವೆ ಮಾಡಿಕೊಂಡು ಬಂದಿರುವ ನಮಗೆ ಅವಮಾನವಾಗಿದ್ದು, ದೇಗುಲದ ಮುಂದಿನ ಯಾವುದೇ ಉತ್ಸವಗಳಲ್ಲೂ ನಾವು ಭಾಗಿಯಾಗುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಡ್ಡೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ವೇದಾಂತ ದೇಶಿಕರ ತಿರು ನಕ್ಷತ್ರ ಉತ್ಸವಕ್ಕೆ ಸೇವಾರ್ಥದಾರರು ಸರಿಯಾಗಿ ಆಗಮಿಸದ ಕಾರಣ ನಾವುಗಳು ಮತ್ತು ಹಿಂದಿನ ಇಒ ಮತ್ತು ಅರ್ಚಕರು ತೀರ್ಮಾನಿಸಿದಂತೆ ನಾವು ಈ ಬಾರಿ ಸೇವಾರ್ಥದಾರಿಂದ ಚಲನ್ ಕಟ್ಟಿಸಿಕೊಳ್ಳಬಾರದೆಂದು ಮೊದಲೇ ತಿಳಿಸಿದ್ದರೂ ದೇಗುಲದ ಇಒ ಹಾಗೂ ತಹಶೀಲ್ದಾರ್ ಎಂ.ಮಮತಾ, ಯಾರ ಮಾತನ್ನೂ ಕೇಳದೆ ಚಲನ್ ಕಟ್ಟಿಸಿಕೊಂಡರು. ಆದರೆ ಉತ್ಸವಕ್ಕೆ ನಾವು ಬರುವುದಿಲ್ಲವೆಂದು ತಿಳಿಸಿದ್ದರಿಂದ ನಮಗೆ ನೋಟಿಸ್ ನೀಡಿ ಅಧಿಕಾರಿ ಸಿಬ್ಬಂದಿಯೇ ಉತ್ಸವದ ಅಡ್ಡೆಯನ್ನು ಹೊತ್ತು ಉತ್ಸವ ಮಾಡಿಸಿ, ನಮಗೆ ನೋಟಿಸ್ ನೀಡಿದ್ದಾರೆ. ಆದ್ದರಿಂದ ಮುಂದಿನ ಯಾವುದೇ ಉತ್ಸವಗಳಲ್ಲೂ ಬಾಗವಹಿಸುವುದಿಲ್ಲ. ಈ ವಿಚಾರವಾಗಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಮತ್ತು ಇಲಾಖೆ ಆಯುಕ್ತರನ್ನು ಸಂಪರ್ಕಿಸಿ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಅಡ್ಡೆಗಾರರ ಸಂಘದ ಖಜಾಂಚಿ ಪ್ರಮೋದ್, ನಿರ್ದೇಶಕ ಚಂದ್ರು, ಪುಟ್ಟಸ್ವಾಮಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net