

ಚಿಕ್ಕಬಳ್ಳಾಪುರ: ಬಿರುಸಿನ ಕೃಷಿ ಬೆಳೆ ಕಟಾವಿನಲ್ಲಿ ಮೇವು ಉತ್ಪಾದನೆಯಾಗುತ್ತಿದ್ದು ಮುಂಬರುವ ದಿನಗಳಲ್ಲಿ ಹೈನೋದ್ಯಮದ ನಿರ್ವಹಣೆ ದೃಷ್ಟಿಯಿಂದ ಅಗತ್ಯ ದಾಸ್ತಾನು ಮತ್ತು ಸಾಗಣೆ ಪ್ರಕ್ರಿಯೆ ನಡೆಯುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಮೇವಿಗೆ ಯಾವುದೇ ಸಮಸ್ಯೆ ಇಲ್ಲ. 36 ವಾರಗಳಿಗೂ ಹೆಚ್ಚು ದಿನಗಳಿಗಾಗುವಷ್ಟು ದಾಸ್ತಾನಿದೆ ಎಂದು ಪಶುವೈದ್ಯ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಹಿಂದೆ ಬರದ ಹಿನ್ನೆಲೆಯಲ್ಲಿ ಮೇವು ಉತ್ಪಾದನೆ ಪ್ರಮಾಣ ಕುಸಿತಗೊಂಡು, ಕೃಷಿಕರು ಸಂಕಷ್ಟ ಅನುಭವಿಸುವಂತಾಗಿತ್ತು. ಬೇರೆ ಭಾಗಗಳಿಂದ ತರಿಸಿಕೊಳ್ಳುವುದರ ಜತೆಗೆ ಸ್ಥಳೀಯವಾಗಿ ಪರಿಹಾರ ಕ್ರಮಗಳ ಮೂಲಕ ಮೇವಿನ ಪ್ರಮಾಣ ಹೆಚ್ಚಳಕ್ಕೆ ಕಸರತ್ತು ನಡೆಸಲಾಗಿತ್ತು. ಇದರಿಂದ ಸಹಜವಾಗಿ ಬೇಡಿಕೆ ಮತ್ತು ಬೆಲೆ ಏರಿಕೆ ಇತ್ತು. ಅನೇಕರು ಕಸಾಯಿಖಾನೆಗೆ ರಾಸುಗಳನ್ನು ಮಾರಿದ್ದರು. ಆದರೆ, ಈ ಬಾರಿ ಮುಂಗಾರು ಕೈಕೊಟ್ಟರೂ ಹಿಂಗಾರಿನಲ್ಲಿ ಉತ್ತಮ ಮಳೆ ಸುರಿದಿದೆ. ಪ್ರಸ್ತುತ ರಾಗಿ, ಮುಸುಕಿನ ಜೋಳ ಕಟಾವಿನ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಮೇವು ಹೆಚ್ಚು ಲಭ್ಯವಾಗುತ್ತಿದೆ. ಪ್ರಸ್ತುತ ಒಂದು ಕಟ್ಟು ಹುಲ್ಲಿನ ಕಡ್ಡಿ ಬೆಲೆ 150 ರೂ.ಗಳಿಂದ 200 ರೂ.ಗಳವರೆಗೆ ಇದೆ. ಹಿಂದೆ 250 ರೂ.ಗಳಿಂದ 400 ರೂ.ಗಳವರೆಗೆ ಮಾರಾಟವಾಗುತ್ತಿತ್ತು. ಬೇಸಿಗೆ ಹಿನ್ನೆಲೆಯಲ್ಲಿ ಮುಂಬರುವ ದಿನಗಳ ಮತ್ತಷ್ಟು ಬೆಲೆ ಏರಿಕೆ ಜತೆಗೆ ಬೇಡಿಕೆಯೂ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೇಸಿಗೆಗೆ ಈಗಿನಿಂದಲೇ ಸಿದ್ಧತೆ
ಎರಡು ತಿಂಗಳಲ್ಲಿ ಬೇಸಿಗೆಯು ಜೋರು ಪ್ರಭಾವ ಬೀರಲಿದೆ. ಇದಕ್ಕೆ ಈಗಿನಿಂದಲೇ ಕುಡಿಯುವ ನೀರು, ಮೇವು ಸಮಸ್ಯೆ ನಿವಾರಣೆಗೆ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಜಿಲ್ಲಾಡಳಿತವೂ ಅಲರ್ಟ್ ಆಗಿದೆ. ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಮೇವು ಲಭ್ಯವಿದೆ. ಇನ್ನು ಮಾರ್ಚ್, ಏಪ್ರಿಲ್ ಬಳಿಕ ಮುಂಗಾರು ಅವಧಿಯ ಮಳೆಗಾಲದಲ್ಲಿ ಮೇವು ಉತ್ಪಾದನೆಗೆ ರಾಜ್ಯ ಬಜೆಟ್ ಪೂರ್ವ ಅಗತ್ಯತೆಯ ಕ್ರಿಯಾಯೋಜನೆ ತಯಾರು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ನಿಟ್ಟಿನಲ್ಲಿ ಸಿದ್ಧತೆಯಲ್ಲಿ ತೊಡಗಲಾಗಿದೆ. ಜಿಲ್ಲೆಯಲ್ಲಿ ಮೇವಿನ ಉತ್ಪಾದನೆ ಹೆಚ್ಚಳಕ್ಕೆ ಸರಾಸರಿ 60 ಸಾವಿರ ಮೇವಿನ ಮಿನಿ ಕಿಟ್‌ಗಳ ಅಗತ್ಯವಿದೆ.
ಹೈನುಗಾರಿಕೆಯಲ್ಲಿ ಮೇಲುಗೈ
ಮೊದಲಿನಿಂದಲೂ ಹೈನುಗಾರಿಕೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಆದರೆ, ಆಗಾಗ ಕಾಡುವ ಬರದಿಂದ ನಲುಗುವುದು ಸಾಮಾನ್ಯವಾಗಿದೆ. ಇದರ ನಡುವೆಯೂ ಹೂವು, ಹಣ್ಣು, ತರಕಾರಿ ಗಳನ್ನು ಬೆಳೆಯುವುದರ ಜತೆಗೆ ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ತೋರ ಲಾಗುತ್ತಿದೆ. ಕೃಷಿಯ ಜತೆಗೆ ಅನೇಕ ರೈತರು ಹೈನೋದ್ಯಮವನ್ನೂ ಪ್ರಮುಖ ಉಪಕಸುಬು ಮಾಡಿಕೊಂಡಿದ್ದಾರೆ.
ಜಾನುವಾರು ಲೆಕ್ಕಾಚಾರ
ಜಿಲ್ಲೆಯಲ್ಲಿ 2019ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,40,215 ದನ ಮತ್ತು ಎಮ್ಮೆಗಳು ಮತ್ತು 8,01,589 ಕುರಿ, ಮೇಕೆಗಳು ಸೇರಿ 10,41,804 ಮೇವು ಆಧಾರಿತ ಜಾನುವಾರುಗಳಿವೆ.
"ಜಿಲ್ಲೆಯಲ್ಲಿ ಪ್ರಸ್ತುತ ಮೇವಿನ ಕೊರತೆ ಇಲ್ಲ. ಸ್ಥಳೀಯವಾಗಿ ಅಗತ್ಯವಿದ್ದಷ್ಟು ಲಭಿಸುತ್ತಿದೆ. ಇನ್ನು ಬೇಸಿಗೆಯಲ್ಲಿ ಕಾಡಲಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು." - ಭಕ್ತರಹಳ್ಳಿ ಪ್ರತೀಶ್ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಚಿಕ್ಕಬಳ್ಳಾಪುರ