

ಕನಕಗಿರಿ: ಜಾತ್ರೆ ಜತೆಗೆ ಕನಕಗಿರಿ ಉತ್ಸವ ಮಾಡುವುದು ಸಚಿವ ಶಿವರಾಜ ತಂಗಡಗಿ ಅವರ ಏಕಪಕ್ಷಿಯ ನಿರ್ಧಾರವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಶಾಂತಪ್ಪ ಬಸರಿಗಿಡ ಹೇಳಿದರು.
ಕನಕಾಚಲ ಜಾತ್ರೆ ಜತೆಗೆ ಮಾ.20, 21 ರಂದು ಕನಕಗಿರಿ ಉತ್ಸವಕ್ಕೆ ಸಚಿವ ಶಿವರಾಜ ತಂಗಡಗಿ ತೀರ್ಮಾನಿಸಿದ್ದು, ಇದು ಏಕಪಕ್ಷಿಯ ನಿರ್ಧಾರವಲ್ಲ. ಈ ಹಿಂದೆ ತೇರಿನ ಮನೆ ಭೂಮಿ ಪೂಜೆ ಮಾಡಿದ ಸಂದರ್ಭದಲ್ಲಿ ಜಾತ್ರೆ ಜತೆ ಉತ್ಸವ ಮಾಡುವ ಕುರಿತು ಅಭಿಪ್ರಾಯ ತಿಳಿಸಿದ್ದರು. ಪಕ್ಷಾತೀತವಾಗಿ ಕರೆದಿದ್ದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿ ಜಾತ್ರೆ ಸಮಯದಲ್ಲಿ ಉತ್ಸವ ಮಾಡುವುದರಿಂದ ಕನಕಗಿರಿ ಉತ್ಸವ ಕಾಯಂ ಆಗುತ್ತದೆ. ಇತಿಹಾಸ ಪ್ರಚಾರವಾಗುತ್ತದೆ ಎಂದು ಎಲ್ಲರ ಒಪ್ಪಿಗೆಯೊಂದಿಗೆ ದಿನಾಂಕ ಘೋಷಣೆ ಮಾಡಿದ್ದಾರೆ. ಸಾರ್ವಜನಿಕರು ಉತ್ಸವಕ್ಕೆ ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.