ಮಹಿಳಾ ಕಾಲೇಜಿನಲ್ಲಿಲ್ಲ ಸವಲತ್ತು

26 hkr 01
Published on

ಹಿರೇಕೆರೂರ: ಹಾವೇರಿಯ ಜಿಲ್ಲೆಯ ಏಕೈಕ ಸರ್ಕಾರಿ ಮಹಿಳಾ ಐಟಿಐ ಕಾಲೇಜ್ ಮೂಲಸೌಕರ್ಯಗಳಿಂದ ಬಳಲುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಪಟ್ಟಣದ ಬಸವೇಶ್ವರ ನಗರದ ಬಾಡಿಗೆ ಕಟ್ಟಡದಲ್ಲಿ 2007-08ರಲ್ಲಿ ಕಾಲೇಜ್ ಕಾರ್ಯಾರಂಭಿಸಿತು. ಹೆಸರಿಗೆ ಮಾತ್ರ ಮಹಿಳಾ ಕಾಲೇಜ್. ಇಲ್ಲಿ ಪುರುಷ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ. ಇಲೆಕ್ಟ್ರಿಷಿಯನ್, ಮೆಕಾನಿಕಲ್, ಐಸಿಟಿಎಸ್​ಎಂ ಹಾಗೂ ಹೊಲಿಗೆ ತರಬೇತಿ ಕೋಸ್​ಗಳಿದ್ದು, ಒಟ್ಟು 120 ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಪ್ರಸ್ತುತ 136 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹೊಲಿಗೆ ತರಬೇತಿ ಕೋರ್ಸ್​ಗೆ ಶಿಕ್ಷಕರು ಇಲ್ಲದ ಕಾರಣ ಯಾರೊಬ್ಬರೂ ಪ್ರವೇಶ ಪಡೆದಿಲ್ಲ.
ಸ್ಥಳಾವಕಾಶ ಕೊರತೆ:
ಕಾಲೇಜಿಗೊಂದು ನಾಮಫಲಕವಿಲ್ಲ. ಸ್ಥಳಾವಕಾಶದ ಕೊರತೆಯಿಂದಾಗಿ ಪ್ರಾಯೋಗಿಕ ಯಂತ್ರಗಳು ಮೂಲೆ ಸೇರಿವೆ. ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಜನರೇಟರ್ ಬಳಸುತ್ತಿಲ್ಲವಾದ್ದರಿಂದ ಮೂಲೆಗುಂಪಾಗಿದೆ. ಕೊಠಡಿಗಳು ಚಿಕ್ಕದಾಗಿದ್ದು, ಆಸನಗಳ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಸ್ವಚ್ಛತೆ ಮರಿಚಿಕೆಯಾಗಿದೆ. ಶೌಚಗೃಹಗಳು ದುರ್ನಾತ ಬೀರುತ್ತಿವೆ. ಪ್ರತ್ಯೇಕ ಪ್ರಯೋಗಾಲಯವಿಲ್ಲ. ತರಬೇತಿ ಸಾಮಗ್ರಿಗಳು ಇಲ್ಲ, ಮುಖ್ಯವಾಗಿ ಬೋಧನಾ ಫಲಕಗಳು ಹಾಳಾಗಿವೆ.
ಒಟ್ಟು 26 ಹುದ್ದೆಗಳ ಪೈಕಿ ಒಬ್ಬರು ಕಚೇರಿ ಅಧೀಕ್ಷಕ, ಒಬ್ಬರು ಪ್ರಥಮ ದರ್ಜೆ ಸಹಾಯಕ, ಒಬ್ಬರು ದ್ವಿತಿಯ ದರ್ಜೆ ಸಹಾಯಕ, ಮೂವರು ಕಿರಿಯ ತರಬೇತಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, 20 ಹುದ್ದೆಗಳು ಖಾಲಿ ಇವೆ.
ಆಡಳಿತಾಧಿಕಾರಿ ಹಾಗೂ ಪ್ರಾಚಾರ್ಯರು ಪ್ರಭಾರಿಯಾಗಿದ್ದು, ಬನವಾಸಿ, ಸಿದ್ದಾಪುರ ಹಾಗೂ ಹಿರೇಕೆರೂರಿನಲ್ಲಿ ಮೂರು ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಪ್ರ.ದ.ಸ 2, ದ್ವಿ.ದ.ಸ 1, ತರಬೇತಿ ಅಧಿಕಾರಿ 1, ಕಿರಿಯ ತರಬೇತಿ ಅಧಿಕಾರಿ 09, ಗ್ರುಪ್ ಡಿ 2, ವರ್ಕ್​ಶಾಪ್ 3 ಸೇರಿ ಒಟ್ಟು 20 ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತಿದೆ.

ನನಗೆ ಮೂರು ಕಾಲೇಜುಗಳ ಜವಾಬ್ದಾರಿ ವಹಿಸಲಾಗಿದೆ. ಇಲ್ಲಿನ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೆ ಕಾಲೇಜು ಕಟ್ಟಡಕ್ಕೆ ಬಸರೀಹಳ್ಳಿ ಪ್ಲಾಟ್​ನಲ್ಲಿ 3 ಎಕರೆ ಸ್ಥಳ ಹಾಗೂ ಕಟ್ಟಡ ನಿರ್ವಣಕ್ಕೆ 3.75 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ 1ನೇ ಕಂತು 1.15 ಕೋಟಿ ರೂ. ಜಿಲ್ಲಾ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರೀಯೆ ಜಾರಿಯಲ್ಲಿದೆ.|ಮಂಜುನಾಥ ಹೆಗಡೆ, ಪ್ರಭಾರಿ ಪ್ರಾಚಾರ್ಯಸರ್ಕಾರಿ ಮಹಿಳಾ ಐಟಿಐ ಕಾಲೇಜ್​ನಲ್ಲಿ ಆರಂಭದಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದರು. ಇಲ್ಲಿ ಮೂಲಸೌಕರ್ಯಗಳು ಮರಿಚಿಕೆಯಾಗಿದ್ದರಿಂದ ಈಗ ಒಬ್ಬ ವಿದ್ಯಾರ್ಥಿನಿಯೂ ಪ್ರವೇಶ ಪಡೆಯದಿರುವುದು ವಿಪರ್ಯಾಸ. ಇನ್ನು ಮಂಜೂರಾತಿಗೆ ತಕ್ಕಂತೆ ಕಾಯಂ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಕೂಡಲೆ ಸುವ್ಯವಸ್ಥಿತ ಕಟ್ಟಡ ನಿರ್ವಿುಸಬೇಕು.|ಸತೀಶ ತಂಬಾಕದ, ಶಿಕ್ಷಣ ಪ್ರೇಮಿಮೂಲಸೌಕರ್ಯಕ್ಕಾಗಿ ನಮ್ಮ ಸಂಘಟನೆಯಿಂದ ಸತತ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈಗ ಸ್ಥಳ ಹಾಗೂ ಕಟ್ಟಡ ನಿರ್ವಿುಸಲು ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಕೂಡಲೆ ಮೂಲಸೌಕರ್ಯ ಒದಗಿಸಿ, ಮಂಜೂರಾತಿಗೆ ತಕ್ಕಂತೆ ಎಲ್ಲ ಕಾಯಂ ಹುದ್ದೆಗಳನ್ನು ಭರ್ತಿಮಾಡಬೇಕು.| ಗಿರೀಶ ಬಾರ್ಕಿ ಕರವೇ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net