ಈಶಾನ್ಯ ಪದವೀಧರ ಮತದಾರ ಪಟ್ಟಿಗೆ ಅರ್ಜಿ ಸಲ್ಲಿಸಲು ಮಾಹಿತಿ

10 siraguppa 01
ಸಿರಗುಪ್ಪ ನಗರದ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ಎಚ್.ವಿಶ್ವನಾಥ ಮಾತನಾಡಿದರು. ತಾ.ಪಂ.ಇ.ಒ. ಪವನ್‌ಕುಮಾರ್ ಇದ್ದರು.
Published on

ಸಿರಗುಪ್ಪ: ಪದವೀಧರ ಕ್ಷೇತ್ರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ದಪಡಿಸಲಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಸಹ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಹಸೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಈಶಾನ್ಯ ಪದವಿಧರ ಮತಕ್ಷೇತ್ರದ ಮತದಾರರ ನೋಂದಣಿ ಕುರಿತು ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮತದಾರ ನೊಂದಣಿಗೆ ಅರ್ಜಿ ಸಲ್ಲಿಸುವ ಅರ್ಹರು ನವಂಬರ್ 01, 2023ರೊಳಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವೀಧರರಾಗಿರಬೇಕು.

ನಿಗದಿಪಡಿಸಿದ ನಮೂನೆ-18ರಲ್ಲಿ ಭಾವಚಿತ್ರ ಹಾಗೂ ವಿವರದೊಂದಿಗೆ ಭರ್ತಿಮಾಡಿದ ಅರ್ಜಿ, ಅಂಕಪಟ್ಟಿ, ಆಧಾರ್‌ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ವಾಸಸ್ಥಳದ ದಾಖಲೆಗಳನ್ನು ಸ್ವಯಂ ಧೃಡೀಕರಿಸಿ ಪತ್ರಾಂಕಿತ ಅಧಿಕಾರಿಯಿಂದ ಧೃಡೀಕರಿಸಿ ಅರ್ಜಿಯೊಂದಿಗೆ ನವಂಬರ್ 06, 2023ರ ಒಳಗಾಗಿ ಮತದಾರರ ನೋಂಧಾಣಾಧಿಕಾರಿಗಳು ಹಾಗೂ ಸಂಬಂಧಿಸಿದ ಪಟ್ಟಣ ಪಂಚಾಯಿತಿ, ನಗರಸಭೆ, ತಾಲೂಕು ಕಾರ್ಯಾಲಗಳಲ್ಲಿ ಸಲ್ಲಿಸಬಹುದಾಗಿದೆ.

ಅರ್ಹ ಪದವೀಧರರು ಮೂಲ ಪದವಿ ಪ್ರಮಾಣ ಪತ್ರ ಮತ್ತು ಅದರ ಪ್ರತಿಯನ್ನು ಸ್ವಯಂ ಧೃಡೀಕರಣದೊಂದಿಗೆ ಗೊತ್ತುಪಡಿಸಿದ ಅಧಿಕಾರಿಯ ಮುಂದೆ ಹಾಜರಾಗಿ ಅವರಿಂದಲೂ ಧೃಡೀಕೃತವಾದ ಮೇಲೆ ಅವರಲ್ಲಿಯೇ ಕಡ್ಡಾಯವಾಗಿ ನೀಡಬೇಕು.

ಅಲ್ಲದೆ ಅಂಚೆ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದರೆ ಅಂತಹ ಅರ್ಜಿದಾರರಿಗೆ ಗೊತ್ತುಪಡಿಸಿದ ಅಧಿಕಾರಿಗಳು ಹಾಜರಾಗಲು ನೋಟೀಸ್ ನೀಡುತ್ತಾರೆ. ಆ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗದೆ ಅಥವಾ ಸೂಕ್ತ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅಂತಹವರ ಅರ್ಜಿಗಳು ತಿರಸ್ಕೃತವಾಗುತ್ತವೆ.

ಆದ್ದರಿಂದ ಆದಷ್ಟು ಬೇಗ ಆಯಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳಿಂದ, ಪಕ್ಷದ ಮುಖಂಡರುಗಳಿಂದ, ಸಂಘಟನೆಗಳಿಂದ, ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ಮುಂದಾಗುವಂತೆ ಸೂಚಿಸಿದರು. ತಾ.ಪಂ.ಇ.ಒ. ಪವನ್‌ಕುಮಾರ್, ಪೌರಾಯುಕ್ತ ಜೀವನ್‌ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net