

ಚಿಕ್ಕಬಳ್ಳಾಪುರ: ಹಿಂಸಾ ವಾರ್ಗದಿಂದ ದೇಶದ ಸ್ವಾತಂತ್ರ್ಯ ಪಡೆಯಲು ಹೆಚ್ಚಿನ ಜನರ ಪ್ರಾಣ ತ್ಯಾಗದ ಅರಿವಿನಲ್ಲಿ ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ನಗರದ ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗಾಂಧಿಭವನವನ್ನು ಬುಧವಾರ ಉದ್ಘಾಟಿಸಿ ವಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ವಾಡಿ, ಅಹಿಂಸೆಯನ್ನೇ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧಿಯವರು ಜಗತ್ತಿನ ಮಹಾನ್ ನಾಯಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿರುವುದು ಭಾರತೀಯೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ವಾತನಾಡಿ, ಗಾಂಧೀಜಿ ಅವರು ನಂದಿ ಗಿರಿಧಾಮ ಸೇರಿ ಜಿಲ್ಲೆಯ ವಿವಿಧೆಡೆ ಸಂಚರಿಸಿರುವುದು ಈ ಭಾಗದ ಹೆಗ್ಗಳಿಕೆ ವಿಚಾರ ಎಂದರು.
ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠ್ಠಾಧಿಕಾರಿ ಆರ್.ಐ. ಕಾಸಿಂ, ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್ ಮತ್ತಿತರರು ಇದ್ದರು.
ಗಾಂಧಿ ನಡಿಗೆ ಕಾರ್ಯಕ್ರಮ
ವೇದಿಕೆ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಪ್ರತಿನಿಧಿಗಳು ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಬಹುವಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ಜೂನಿಯರ್ ಕಾಲೇಜು ಆವರಣದಿಂದ ಕಾಲ್ನಡಿಗೆ ಜಾಥಾ ನಡೆಯಿತು. ನೂರಾರು ವಿದ್ಯಾರ್ಥಿಗಳು, ಪೌರಕಾರ್ಮಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಲಾ ತಂಡಗಳೊಂದಿಗೆ ಭಾಗವಹಿಸಿದ್ದರು.
ಶಾಸಕರ ಬೆಂಬಲಿಗರಿಂದ ಪೋಟೋ ಗದ್ದಲ
ಗಾಂಧಿ ಭವನ ಉದ್ಘಾಟನಾ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಭಾವಚಿತ್ರವನ್ನು ಹಾಕಿಲ್ಲ ಎಂದು ಆರೋಪಿಸಿ, ಅವರ ಬೆಂಬಲಿಗರು ಗಲಾಟೆ ವಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ವಾಣವಾಯಿತು. ಸ್ವಪಕ್ಷೀಯರ ಬಹಿರಂಗ ಆಕ್ಷೇಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮುಖಭಂಗ ಅನುಭವಿಸಬೇಕಾಯಿತು. ಇತರರೊಂದಿಗೆ ಸೇರಿ ಅಸವಾಧಾನಿತರ ಮನವೊಲಿಸಲು ಪ್ರಯತ್ನಿಸಲಾಯಿತು. ಆದರೂ ಕೂಗಾಟ ಕಡಿಮೆಯಾಗಲಿಲ್ಲ. ಒಂದು ಹಂತದಲ್ಲಿ ಆಕ್ರೋಶದಿಂದ ಕಾರ್ಯಕ್ರಮದ ವೇದಿಕೆ ಬಿಟ್ಟು ತೆರಳಲು ಸಚಿವರು ಮುಂದಾದರು. ಕೊನೆಗೆ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಕೆಟ್ಟ ಸಂದೇಶ ಹೋಗಬಾರದೆಂಬ ಭಾವನೆಯಲ್ಲಿ ಅಲ್ಲಿಯೇ ಕುಳಿತು, ಮೌನಕ್ಕೆ ಶರಣಾದರು.
ಅಧಿಕಾರಿಗಳಿಂದ ಸ್ಪಷ್ಟನೆ
ಕಾರ್ಯಕ್ರಮದ ಶಿಷ್ಟಾಚಾರದ ಬಗ್ಗೆ ಸ್ವತಃ ಸಚಿವ ಸುಧಾಕರ್, ಜಿಲ್ಲಾಧಿಕಾರಿ ಡಾ ಪಿ.ಎನ್.ರವೀಂದ್ರ ಸ್ಪಷ್ಟನೆ ನೀಡಿದರು. ಜಿಲ್ಲಾಡಳಿತ, ಜಿಪಂ ವತಿಯಿಂದ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವನ್ನು ಹೊಂದಿದೆ. ತಾಲೂಕುಮಟ್ಟದ ಕಾರ್ಯಕ್ರಮಗಳಲ್ಲಿ ಆಯಾ ಶಾಸಕರ ಭಾವಚಿತ್ರ ಇರುತ್ತದೆ. ಇಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಸಿಲ್ಲ ಎಂದು ಡಿಸಿ ತಿಳಿಸಿದರು. ಆಗ ಅಸವಾಧಾನಿತರು ಸುಮ್ಮನಾದರು.
ಸಚಿವರಿಗೆ ಬೇಸರ ತಂದ ಪ್ರಕರಣ
ಶಾಸಕರ ಬೆಂಬಲಿಗರ ವರ್ತನೆ ಬಗ್ಗೆ ಸ್ವತಃ ಸಚಿವರೇ ಅಸವಾಧಾನ ವ್ಯಕ್ತಪಡಿಸಿದರು. ಪಕ್ಕದಲ್ಲಿ ಕುಳಿತಿದ್ದ ಪ್ರದೀಪ್ ಈಶ್ವರ್‌ಗೆ ಅನಿರೀಕ್ಷಿತ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಶಾಸಕರು, ಪೊಲೀಸರ ಮೂಲಕ ಬೆಂಬಲಿಗರನ್ನು ಸುಮ್ಮನೆ ಕೂರಲು ಹೇಳಿಸಿದರು.