

ಕಾರವಾರ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆದ ತೀರ್ವನಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಅನುಪಾಲನಾ ವರದಿಯನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ಜಿಪಂ ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಬೆಂಗಳೂರು, ಪುಣೆ, ಮುಂಬೈ ಮುಂತಾದ ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಸಾಫ್ಟ್ವೇರ್ ಇಂಜಿನಿಯರ್ಗಳು ಹಾಗೂ ಇತರ ಸಾಕಷ್ಟು ಉದ್ಯೋಗಿಗಳು ಲಾಕ್ಡೌನ್ ಕಾರಣ ಜಿಲ್ಲೆಗೆ ಮರಳಿದ್ದಾರೆ. ಅವರಿಗೆ ವರ್ಕ್ ಫ್ರಂ ಹೋಂಗೆ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಗ್ರಾಪಂಗಳ ಇಂಟರ್ ನೆಟ್ ಅನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಳೆದ ಜುಲೈನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೂ ಸಭೆಯಲ್ಲಿದ್ದರು. ಆದರೆ, ಈ ಸಂಬಂಧ ಇದುವರೆಗೂ ಕ್ರಮವಾಗಿಲ್ಲ. ಜಿಪಂನಿಂದ ತಾಪಂಗಳಿಗೆ, ತಾಪಂಗಳಿಂದ ಎಲ್ಲ ಗ್ರಾಪಂಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಗ್ರಾಪಂಗಳಿಗೆ ಯಾವುದೇ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು.
ಶಿವಾನಂದ ಹೆಗಡೆ ಕಡತೋಕಾ, ಗಜಾನನ ಪೈ, ಅಲ್ಬರ್ಟ್ ಬರ್ನಲ್ ಡಿಕೋಸ್ಟಾ ಇತರರು ಮಾತನಾಡಿ, ಜಿಪಂ ಸಭೆಗೆ ಬೆಲೆಯೇ ಇಲ್ಲದಂತಾಗಿದೆ. ಪಾಲನಾ ವರದಿ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್ ತಿಳಿಸಿದರು.
ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ತಲಾ 5 ರೂ. ನೋಂದಣಿ ಶುಲ್ಕ ಪಡೆಯಲಾಗುತ್ತದೆ. ಆದರೆ, ಸಿದ್ದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರಿಂದ 20 ರೂ. ಶುಲ್ಕ ಆಕರಿಸಲಾಗುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಅದನ್ನು ಕಡಿಮೆ ಮಾಡದಿದ್ದಲ್ಲಿ ಜಿಪಂ ಕಚೇರಿ ಎದುರು ತಾಲೂಕಿನ ಜನರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸುಮಂಗಲಾ ನಾಯ್ಕ ಎಚ್ಚರಿಸಿದರು. ಸ್ಪಂದಿಸಿದ ಜಿಪಂ ಅಧ್ಯಕ್ಷ ಜಯಶ್ರೀ ಮೊಗೇರ, ಶುಲ್ಕ ಕಡಿಮೆ ಮಾಡುವಂತೆ ಆರೋಗ್ಯ ರಕ್ಷಾ ಸಮಿತಿಗೆ ಪತ್ರ ಬರೆಯುವಂತೆ ಡಿಎಚ್ಒ ಡಾ. ಶರದ್ ನಾಯಕ ಅವರಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿಯವರು ಇಲ್ಲದ ಸ್ಥಳದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಜಿಪಂ ಸಿಇಒ ಅವರಿಗೆ ವರದಿ ನೀಡುವಂತೆ ನಿಗಮದ ಅಧಿಕಾರಿಗಳಿಗೆ, ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ತನಿಖೆಯಾಗಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ದೂರಿದರು. ಆದರೆ, ತನಿಖೆಗೆ ಯಾವುದೇ ಆದೇಶ ಬಂದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ಸಭೆಗೆ ತಿಳಿಸಿದ ಬಗ್ಗೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ತನಿಖೆಯಾಗದಿದ್ದರೆ ಧರಣಿ: ಹೊನ್ನಾವರದ ಪಾವಿನಕುರ್ವಾದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ವಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಅಡಿಪಾಯ ತೆಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಶಿವಾನಂದ ಹೆಗಡೆ ಕಡತೋಕಾ ಆಕ್ಷೇಪಿಸಿದರು. ಯೋಜನೆಯ ವಿನ್ಯಾಸ ಬದಲಾಗಿದ್ದು, ಅದು ಇನ್ನಷ್ಟೇ ಬರಬೇಕಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಯೋಜನೆ ಜಾರಿಗೂ ಮುಂಚೆ ಅದರ ವಿನ್ಯಾಸ ಮಾಡಬೇಕು ಎಂಬ ಅರಿವು ಇಲಾಖೆಯ ಅಧಿಕಾರಿಗಳಿಗೆ ಇಲ್ಲವೇ. ಈ ಕುರಿತು 15 ದಿನದಲ್ಲಿ ತನಿಖೆ ನಡೆಯಬೇಕು ಇಲ್ಲದಿದ್ದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.