ಯೋಗೇಶ್ವರ್ ಗೆಲ್ಲುವ ಕುದುರೆ! : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

cpt
Published on

ಚನ್ನಪಟ್ಟಣ : ಜೆಡಿಎಸ್‌ನವರು ಯಾರನ್ನೇ ಅಭ್ಯರ್ಥಿ ಮಾಡಲಿ, ಕುಮಾರಸ್ವಾಮಿ, ನಿಖಿಲ್ ಅಥವಾ ಕುಮಾರಸ್ವಾಮಿ ಪತ್ನಿ ಸ್ಪರ್ಧಿಸಿದರೂ ಯೋಗೇಶ್ವರ್ ಗೆಲ್ಲುತ್ತಾರೆ. ಸಿಪಿವೈ ಗೆಲ್ಲುವ ಕುದುರೆ. ಅವರಿಗೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ರೋಡ್ ಷೋನಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ನಿಮಗೆ ಹೊಸಬರಲ್ಲ. ಐದು ಬಾರಿ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಮೂಲತಃ ಕಾಂಗ್ರೆಸ್‌ನವರು. ಎನ್‌ಡಿಎ ಪಾರ್ಟಿಯಲ್ಲಿ ಅವರಿಗೆ ಟಿಕೆಟ್ ಕೊಡಲಿಲ್ಲ. ಹೀಗಾಗಿ ಅವರು ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯೋಗೇಶ್ವರ್ ಅವರನ್ನು ಚನ್ನಪಟ್ಟಣದ ಮಹಾಜನತೆ ಭಾರಿ ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.

ಜನಪ್ರಿಯ ಶಾಸಕ: ಐದು ಬಾರಿ ಶಾಸಕರಾಗಿ, ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿ ಕೆರೆಗಳು ತುಂಬಿ, ಸದಾ ಹಸಿರಾಗಿಸಿದ ಕೀರ್ತಿ ಯೋಗೇಶ್ವರ್‌ಗೆ ಸಲ್ಲುತ್ತದೆ. ತಾಲೂಕಿನ ಜನರ ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಯೋಗೇಶ್ವರ್ ಸೇರಿ ನಾವೆಲ್ಲರೂ ಸದಾ ಜತೆ ಇರುತ್ತೇವೆ. ದೊಡ್ಡ ಅಂತರದಿಂದ ಸಿ.ಪಿ.ವೈ ಗೆಲ್ಲಬೇಕು. ಅದಕ್ಕಾಗಿ ನಾಮಿನೇಷನ್‌ಗೆ ನಾನೇ ಬಂದಿದ್ದೇನೆ. ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾವು ಇನ್ನೂ ಮೂರು ವರ್ಷ ಅಧಿಕಾರದಲ್ಲಿರುತ್ತೇವೆ. ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಸಿಎಂ ಆದರೂ ಕ್ಷೇತ್ರಕ್ಕೆ ಏನು ಮಾಡಿಲ್ಲ. ಈಗ ಕೇಂದ್ರ ಮಂತ್ರಿ ಆಗಿದ್ದಾರೆ. ಹಿಂದೆ ನಾವೇ ಅವರನ್ನು ಸಿಎಂ ಮಾಡಿದ್ದೆವು. ಏನೂ ಕೆಲಸ ಮಾಡದೇ ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡುತ್ತಾರೆ ಎಂದು ಆರೋಪಿಸಿದರು.

ಇಡೀ ದೇಶಕ್ಕೆ ಸಂದೇಶ ಕೊಡಿ! : ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಶುಭಗಳಿಗೆ, ಶುಭಮುಹೂರ್ತದಲ್ಲಿ ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದಿದ್ದಾರೆ. ಇಲ್ಲಿ ದಾಖಲೆ ಅಂತರದಲ್ಲಿ ಗೆಲ್ಲಿಸಿ. ಇದು ಇಲ್ಲಿಗೆ ಮುಗಿಯೊಲ್ಲ, ಪಿಕ್ಚರ್ ಇನ್ನೂ ಬಾಕಿ ಇದೆ. ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಕಾಂಗ್ರೆಸ್‌ಗೆ 85 ಸಾವಿರ ಮತ ಕೊಟ್ಟಿದ್ದೀರಿ. ಬೇರೆ ಕಡೆ ಓಟ್ ಕಡಿಮೆ ಆದ್ದರಿಂದ ಡಿ.ಕೆ.ಸುರೇಶ್ ಅವರು ಗೆಲ್ಲಲಿಲ್ಲ. ನಾವು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.

ಸಾಕಷ್ಟು ಬಿಜೆಪಿ-ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಬಂದಿದ್ದಾರೆ. ನಿಮ್ಮನ್ನು ಯಾವುದೇ ಕಾರಣಕ್ಕೂ ಕೈಬಿಡಲ್ಲ. ಭವಿಷ್ಯದಲ್ಲಿ ನಿಮ್ಮ ಜತೆ ಇದ್ದು, ಕೆಲಸ ಮಾಡುತ್ತೇವೆ. ಕಷ್ಟಕಾಲದಲ್ಲಿ ನಮ್ಮ ಜತೆ ಬಂದವರ ಕೈ ಹಿಡಿಯಬೇಕು. ಈಗಾಗಲೇ ಯೋಗೇಶ್ವರ್ ಜತೆ ಮಾತನಾಡಿದ್ದೇನೆ. ಹಳಬರು ಹಾಗೂ ಹೊಸಬರು ಎನ್ನದೇ ಎಲ್ಲರೂ ಯೋಗೇಶ್ವರ್ ಗೆಲುವಿಗೆ ಶ್ರಮಿಸಬೇಕು ಎಂದು ಕರೆನೀಡಿದರು.

ಕ್ಷೇತ್ರಕ್ಕೆ ಈಗಾಗಲೇ 500 ಕೋಟಿ ರೂ. ಅನುದಾನ ನೀಡಿದ್ದೇವೆ. ಯೋಗೇಶ್ವರ್ ಹಾಗೂ ನಾನು ಒಟ್ಟಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ. ಕ್ಷೇತ್ರದ ಜನರು ನಮಗೆ ಶಕ್ತಿ ತುಂಬಿ. ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲಗೊಂಡಿದ್ದಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂಬುದರ ಪಟ್ಟಿ ಕೊಡಿ ಎಂದು ಜನ ಅವರನ್ನು ಕೇಳಬೇಕು. ಉಪಚುನಾವಣೆಯಲ್ಲಿ ಯೋಗೇಶ್ವರ್ ಗೆಲ್ಲಿಸುವ ಮೂಲಕ ಇಡೀ ದೇಶಕ್ಕೆ ಸಂದೇಶ ಕೊಡಿ ಎಂದು ಮನವಿ ಮಾಡಿದರು.

ಎರಡು ಪಕ್ಷಕ್ಕೂ ಸಂದೇಶ ಕೊಡಿ!:" ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ತಾಲೂಕನ್ನು ಮುನ್ನಡೆಸಲು ಸಿಪಿವೈ ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ. ನಿಮ್ಮ ಮತ ಕೇಳಲು ಇಂದು ಸಿಎಂ, ಡಿಸಿಎಂ ಬಂದಿದ್ದಾರೆ. ಇಲ್ಲಿಂದ ಇಡೀ ರಾಜ್ಯಕ್ಕೆ ಒಂದು ಸಂದೇಶ ಕಳಿಸೋಣ. ರಾಜಕೀಯದಲ್ಲಿ ಕೆಲ ವ್ಯತ್ಯಾಸ ಬರುತ್ತದೆ. ಆದರೆ, ಯಾವುದೂ ಶಾಶ್ವತ ಅಲ್ಲ. ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡಲು ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರಿದ್ದಾರೆ. ಗೆಲ್ಲಿಸುವ ಮೂಲಕ ಸಿಎಂ, ಡಿಸಿಎಂ ಕೈ ಬಲಪಡಿಸಿ.

ಈ ಮೂಲಕ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಕ್ಕೆ ಸಂದೇಶ ಕೊಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಮತನೀಡಿ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬಿಡುವಿಲ್ಲದ ಸಮಯದಲ್ಲಿ ಸಿಎಂ ನನ್ನ ನಾಮಪತ್ರ ಸಲ್ಲಿಸಲು ಬಂದಿರುವುದು ನನಗೆ ಆನೆಬಲ ತಂದಿದೆ. ಇವರೊಂದಿಗೆ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ನನ್ನ ಬೆಂಬಲಕ್ಕೆ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮತನೀಡಿ. ದಾಖಲೆ ಅಂತರದಲ್ಲಿ ಗೆಲ್ಲಿಸಿಕೊಡಿ ಎಂದು ಸಿಪಿವೈ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net