

ಕಂಪ್ಲಿ: ಅಲೆಮಾರಿ, ಬುಡಕಟ್ಟು ಜನಾಂಗಗಳ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಘಟಕ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಆರೋಪಿಸಿದರು.
ಹಕ್ಕಿಪಿಕ್ಕಿ ಕಾಲನಿಯ ಶ್ರೀತುಳಜಾಭವಾನಿ ದೇವಸ್ಥಾನ ಆವರಣದಲ್ಲಿ ಶನಿವಾರ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರೊಂದಿಗೆ ಸಮಾಲೋಚಿಸಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಅಲೆಮಾರಿಗಳ ಅಭಿವೃದ್ಧಿಗಾಗಿ ವಸತಿ ಸೌಕರ್ಯ ಯೋಜನೆಗಳನ್ನು ರೂಪಿಸಿತ್ತು. ಅಲ್ಲದೆ ಅಲೆಮಾರಿ ಮಕ್ಕಳ ಶಿಕ್ಷಣಕ್ಕಾಗಿ ಪ್ರವೇಶ ಪರೀಕ್ಷೆಗಳಿಂದ ವಿನಾಯಿತಿ ನೀಡಿ ನೇರವಾಗಿ ಶಿಕ್ಷಣ ಸೌಲಭ್ಯ ದೊರಕಿಸಿ ಕೊಟ್ಟಿತ್ತು. ಆದರೆ ಈ ಯೋಜನೆಯನ್ನು ಬಿಜೆಪಿ ಸರ್ಕಾರ ತೆಗೆದುಹಾಕಿ ಮಕ್ಕಳಿಗೆ ಅನ್ಯಾಯ ಎಸಗಿದೆ.
ಪ್ರಧಾನಿ ಮೋದಿಯವರ ಆಡಳಿತದಲ್ಲಿ ಅಡುಗೆ ಅನಿಲ ಸೇರಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿ ಜೀವನ ಸಾಗಿಸುವುದೇ ದುಸ್ತರವಾಗಿದೆ. ಅದಾನಿ, ಅಂಬಾನಿಯಂತವರ 20 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿ, ಸಾರ್ವಜನಿಕ ವಲಯದ ಸೇವೆಗಳನ್ನು ಇವರಿಗೆ ವಹಿಸಿಕೊಟ್ಟಿದೆ. ಬಿಜೆಪಿ ಆರ್‌ಎಸ್ಸೆಸ್ ಸೇರಿ ಮೇಲ್ಜಾತಿಯವರ ಪರವಾಗಿದೆಯೇ ಹೊರತು ದಲಿತ, ಶೋಷಿತ, ಹಿಂದುಳಿದ ಹಾಗೂ ಅಲೆಮಾರಿಗಳ ಪರವಾಗಿಲ್ಲ ಎಂದು ಆರೋಪಿಸಿದರು.
ಕಾಲನಿಗೆ ಮತ ಕೇಳಲು ಬಂದವರಿಗೆ ತಮಗೆ ಆದ ಅನ್ಯಾಯ ವಿರುದ್ಧ ಪ್ರಶ್ನಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಲ್ಲಿ ಜಾಗೃತಿವಹಿಸುವಂತೆ ಸಲಹೆ ನೀಡಿದರು. ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಪದಾಧಿಕಾರಿಗಳಾದ ಕೆ.ಚಾವಡೆ ಲೋಕೇಶ್, ಚಮನ್ ಫರ್ಜಾನಾ ಮತ್ತು ಸದಸ್ಯರು, ಹಕ್ಕಿಪಿಕ್ಕಿ ಕಾಲನಿಯ ಪ್ರಮುಖರಾದ ನಾಗರಾಜ ವಕೀಲರು, ಎಚ್.ಪಿ.ಶಿಕಾರಿರಾಮು, ಲತಾ, ಹರಿ, ಮಲ್ಲೇಶಿ, ರಾಜು, ರಾವುಲ್ ನಾಗಪ್ಪ, ಎಚ್.ಪಿ.ಶ್ರೀಕಾಂತ್, ಈರಣ್ಣ, ನಾಗೇಶ, ಲೇಖಣ್ಣ ಇತರರಿದ್ದರು.