ಅಲೆಮಾರಿ ಜನಾಂಗದವರಿಗೆ ಸೂರು : ಜಿಲ್ಲೆಯಲ್ಲಿ ಮನೆಯಿಲ್ಲದ ಅರ್ಹ ಫಲಾನುಭವಿಗೆ ಮನೆ

03-03-rama-alemari
Published on

ರಾಮನಗರ : ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಗ್ರಾಮ ಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಕಲ್ಪಿಸುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಈ ಜನಾಂಗದವರಿಗೆ ಮನೆ ಒದಗಿಸಲು ಗುರಿ ನಿಗದಿಯಾಗಿಲ್ಲ. ನಿವೇಶನ ಹೊಂದಿರುವ ಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ. ನಿವೇಶನ ಹಾಗೂ ಮನೆ ಇಲ್ಲದವರ ಪಟ್ಟಿಯನ್ನೂ ಸಿದ್ಧಪಡಿಸಿ ಎಂದು ತಿಳಿಸಿದರು.

ಅಧಿಕಾರೇತರ ಸದಸ್ಯರ ನೇಮಕಕ್ಕೆ ಕ್ರಮ: ಸಮಿತಿಗೆ ಜನಾಂಗಕ್ಕೆ ಸೇರಿದ ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಒಬ್ಬರನ್ನು ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಿದೆ. ಜನಾಂಗಕ್ಕೆ ಸೇರಿದ ಜಿಪಂ ಸದಸ್ಯರು ಇಲ್ಲ. ಹಾಗಾಗಿ ಸರ್ಕಾರ ವಿಧಿಸಿರುವ ಷರತ್ತುಗಳೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಅರ್ಹ ಸದಸ್ಯರನ್ನು ಆಯ್ಕೆಮಾಡುವಂತೆ ರಾಕೇಶ್ ಕುಮಾರ್ ತಿಳಿಸಿದರು.

ಅರೆ ಅಲೆಮಾರಿ ಹಾಗೂ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಯೋಜನೆಗಳು ತಲುಪಿರುವ ಬಗ್ಗೆ ಪರಿಶೀಲಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರ ನಿಗದಿಪಡಿಸುವಂತೆ ಕಾಲ ಕಾಲಕ್ಕೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆ ಆಯೋಜಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಅಲೆಮಾರಿ ಜನಾಂಗಗಕ್ಕೆ ಸೇರಿದ ಗೊಲ್ಲರು ಹಾಗೂ ದೊಂಬಿದಾಸ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರನ್ನು ಋತುಚಕ್ರ ಅವಧಿಯಲ್ಲಿ ಊರಿನಿಂದ ಹೊರಗಿಡುವುದು ಹಾಗೂ ಇನ್ನೂ ಮುಂತಾದ ಮೂಢನಂಬಿಕೆಗಳನ್ನು ತೊಲಗಿಸಲು ಜಾಗೃತಿ ಕಾರ್ಯಕ್ರಮಗಳನ್ನ ಆಯೋಜಿಸಿ. ಜನಾಂಗದಲ್ಲಿರುವ ವಿದ್ಯಾವಂತರನ್ನು ಗುರುತಿಸಿ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಎಂದು ರಾಕೇಶ್ ಕುಮಾರ್ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

14.80 ಲಕ್ಷ ರೂ. ಮೆಟ್ರಿಕ್‌ಪೂರ್ವ ವಿದ್ಯಾರ್ಥಿವೇತನ : ಮೆಟ್ರಿಕ್ ಪೂರ್ವ ಹಾಗೂ ನಂತರ, ಸ್ನಾತಕೋತ್ತರ ವಿಭಾಗದಲ್ಲಿ ನೀಡುವ ವಿದ್ಯಾರ್ಥಿ ವೇತನದ ಬಗ್ಗೆ ಪರಿಶೀಲಿಸಿದರು. ಸದರಿ ಸಾಲಿನಲ್ಲಿ 740 ವಿದ್ಯಾರ್ಥಿಗಳಿಗೆ 14.80 ಲಕ್ಷ ರೂ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಲಾಗಿದೆ. ಮೆಟ್ರಿಕ್ ನಂತರ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವೇತನ ಪಾವತಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಬಿ. ಬಸವರಾಜು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net