

ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಅದನ್ನು ಸಾರ್ವಜನಿಕರೇ ಪೊಲೀಸರಿಗೆ ತಿಳಿಸುವಂಥ 'ಪಬ್ಲಿಕ್ ಐ' ಎಂಬ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಮಾಡಿಕೊಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಅದೆಷ್ಟೋ ಮಂದಿ ಈ ಮೂಲಕ ದಂಡ ತೆರುವಂತಾಗಿದ್ದು ಕೂಡ ಸುಳ್ಳಲ್ಲ. ಆದರೆ ಇದೀಗ ಸಂಚಾರ ನಿಯಮ ಉಲ್ಲಂಘಿಸಿರುವ ಪೊಲೀಸರೇ ಪಬ್ಲಿಕ್ ಐನಲ್ಲಿ ಅರ್ಥಾತ್ ಸಾರ್ವಜನಿಕರ ನೋಟಕ್ಕೆ ಸಿಕ್ಕಿ ಹಾಕಿಕೊಂಡಿದ್ದು ಸಿಬ್ಬಂದಿ ಜತೆಗೆ ಇಲಾಖೆಗೂ ಮುಜುಗರ ಉಂಟಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.
ಪೊಲೀಸ್ ಸಿಬ್ಬಂದಿ ಇಬ್ಬರು ತಮ್ಮ ವಾಹನ ನಿಲ್ಲಿಸಿ ಕರ್ತವ್ಯದಲ್ಲಿದ್ದಾಗ, ಆ ವಾಹನದ ನಂಬರ್ ನಮೂದಿಸಿಕೊಂಡು ಪರೀಕ್ಷಿಸಿದ ಸಾರ್ವಜನಿಕರು ಸರ್ಕಾರದ ಎಂ ಪರಿವಾಹನ್ ಆ್ಯಪ್ ಮೂಲಕ ವಿವರಗಳನ್ನು ಪರಿಶೀಲಿಸಿದ್ದಾರೆ. ಆಗ ಆ ದ್ವಿಚಕ್ರವಾಹನದ ವಿಮೆ ಅವಧಿ ಮುಗಿದಿರುವುದು ಕಂಡು ಬಂದಿದೆ. 2019ರ ಜುಲೈ 16ಕ್ಕೆ ವಿಮೆ ಅವಧಿ ಮುಗಿದಿದ್ದರೂ ನವೀಕರಿಸದೆ ಅದನ್ನು ಬಳಸುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು (ಫೆ. 25) ಬೆಂಗಳೂರಿನ ಶಿರಸಿ ಸರ್ಕಲ್ನಲ್ಲಿ ಈ ವಾಹನ ಹಾಗೂ ಪೊಲೀಸರು ಕಂಡು ಬಂದಿದ್ದು, ಮಂಜಿತ್ (@manjith_r) ಎನ್ನುವವರು ಟ್ವಿಟರ್ನಲ್ಲಿ ಈ ವಿವರಗಳನ್ನು ಪೋಸ್ಟ್ ಮಾಡಿಕೊಂಡು ಬೆಂಗಳೂರು ಪೊಲೀಸರ ಟ್ವಿಟರ್ ಹ್ಯಾಂಡಲ್ಗೆ ಮೆನ್ಷನ್ ಮಾಡಿ ಗಮನ ಸೆಳೆದಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ