

ಮಳವಳ್ಳಿ: ಜನರ ಸಂಬಂಧಗಳು ಗಟ್ಟಿಯಾಗುವ ಸಲುವಾಗಿ ಇಂತಹ ಧಾರ್ಮಿಕ ಅಭಿವೃದ್ಧಿ ಕೆಲಸಗಳ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಶ್ರೀ ರಾಮ ಒಕ್ಕಲಿಗರ ಸೇವಾ ಸಂಘದ ವತಿಯಿಂದ ನಿರ್ಮಿಸಿರುವ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡುವುದರ ಜತೆಗೆ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೈವ ಪ್ರೇರಣೆ ಇಲ್ಲದೇ ಯಾವುದೇ ಯಶಸ್ಸು ಸಾಧ್ಯವಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಂದ ಮನುಕುಲದಲ್ಲಿ ಬಾಂಧವ್ಯಗಳ ವೃದ್ಧಿಯಾಗಲಿವೆ. ಮಳವಳ್ಳಿ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಇಂದಿನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗಮಿಸಬೇಕಿತ್ತು. ಕೇಂದ್ರ ಸರ್ಕಾರದ ತುರ್ತು ಸಚಿವ ಸಂಪುಟ ಕರೆದಿರುವ ಹಿನ್ನೆಲೆಯಲ್ಲಿ ಅವರು ಬರಲು ಸಾಧ್ಯವಾಗದ ಕಾರಣ ನಾನೇ ಆಗಮಿಸಿದ್ದೇನೆ ಎಂದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿದ್ದಾಗ ರೈತರು, ಹಿಂದುಳಿದ ವರ್ಗಗಳು, ದಲಿತ ಪರವಾದ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಇವರ ಮುತ್ಸದ್ದಿತನದ ಮೌಲ್ಯಯುತ ರಾಜಕಾರಣದ ಆಡಳಿತದಿಂದ ಡಾ.ಅಂಬೇಡ್ಕರ್ ರವರ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಇಲ್ಲಿನ ರಾಮ ಸಮುದಾಯ ಭವನವನ್ನು ಉದ್ಘಾಟನೆ ಮಾಡುವ ಮೂಲಕ ಈ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಸೇರುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ವರ್ಚಸ್ವಿ ಶ್ರೀಕಂಠದತ್ತ ಸಿದ್ಧಲಿಂಗರಾಜೇ ಅರಸ್, ಜಿ.ಪಂ.ಮಾಜಿ ಸದಸ್ಯ ಎಂ.ಸಿ.ವಿರೇಗೌಡ, ಮಾಜಿ ಪುರಸಭಾ ಅಧ್ಯಕ್ಷ ಎಂ.ಎಚ್.ಕೆಂಪಯ್ಯ, ಪುರಸಭೆ ಉಪಾಧ್ಯಕ್ಷ ಜಯಸಿಂಹ, ಸದಸ್ಯರಾದ ನಂದಕುಮಾರ್, ರಾಧ ನಾಗರಾಜು ಸೇರಿದಂತೆ ಇತರರಿದ್ದರು.