

ವಿಶೇಷ ವರದಿ
ತುಮಕೂರು: ಸೇವೆ ಕಾಯಂಮಾತಿ ಹಾಗೂ ಸೇವಾಭದ್ರತೆಗೆ ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಕಳೆದ ಐದು ತಿಂಗಳಿನಿಂದ ವೇತನ ನೀಡದ ಬಗ್ಗೆ ಧ್ವನಿಎತ್ತಿದ್ದಾರೆ.
ಜಿಲ್ಲೆಯಲ್ಲಿ 324 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದು ಕಳೆದ ಆಗಸ್ಟ್‌ನಿಂದ ಪ್ರತೀ ತಿಂಗಳ ವೇತನ ರೂಪವಾಗಿ 12 ಸಾವಿರ ರೂ., ಗೌರವಧನವನ್ನು ನೀಡಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯದ ಬೇರೆ ಜಿಲ್ಲೆಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ಅಕ್ಟೋಬರ್‌ವರೆಗೆ ಬಿಡುಗಡೆ ಮಾಡಿದ್ದು ಜಿಲ್ಲೆಯ ಉಪನ್ಯಾಸಕರಿಗೆ ನೀಡಿಲ್ಲದಿರುವುದು ಇದೀಗ ಬೆಳಕಿಗೆ ಬಂದಿದೆ. ಇದರಲ್ಲಿ ಕೆಲವರಿಗೆ ಜೂನ್ ತಿಂಗಳಿನಿಂದಲೇ ಗೌರವಧನ ಬಂದಿಲ್ಲದಿರುವುದು ಅತಿಥಿ ಉಪನ್ಯಾಸಕರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವುದಕ್ಕೆ ನಿದರ್ಶನವೆನಿಸಿದೆ.
74 ಸರ್ಕಾರಿ ಕಾಲೇಜು: ಜಿಲ್ಲೆಯಲ್ಲಿ 74 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಒಟ್ಟು 26 ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 324 ಅತಿಥಿ ಉಪನ್ಯಾಸಕರು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ನಿರ್ದಿಷ್ಟ ಖಾಲಿ ಹುದ್ದೆಗಳಿಗೆ ನೇಮಿಸಿಕೊಂಡಿರುವರಿಗೆ ಮಾತ್ರ ಮೊದಲೆರಡು ತಿಂಗಳ ಗೌರವಧನ ನೀಡಲಾಗಿದೆ. ಆದರೆ, ಹೆಚ್ಚುವರಿ ಹಾಗೂ ಹುದ್ದೆ ಮಂಜೂರಾಗದ ಕಾಲೇಜುಗಳಲ್ಲಿ ಆರಂಭಿಸಿರುವ ಹೊಸ ಕೋರ್ಸ್ ಇರುವ ಕಡೆ ನೇಮಿಸಿಕೊಂಡಿರುವ ಅತಿಥಿ ಉಪನ್ಯಾಸಕರಿಗೂ ಈಗ ಗೌರವಧನ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಕೆಲವರಿಗೆ ಜೂನ್‌ನಿಂದಲೇ ಗೌರವಧನ ಬಂದಿಲ್ಲ. ಇನ್ನು ಉಳಿದವರಿಗೆ ಆಗಸ್ಟ್‌ನಿಂದ ಗೌರವಧನ ನೀಡಿಲ್ಲ.
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 5 ತಿಂಗಳನಿಂದ ಗೌರವ ಧನ ನೀಡಿಲ್ಲ. ಜೀವನ ಸಾಗಿಸುವುದಾದರು ಹೇಗೆ? ಬೇರೆ ಜಿಲ್ಲೆಗಳಲ್ಲಿ ವೇತನ ಬಿಡುಗಡೆ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ ಈ ಸಮಸ್ಯೆ ಇದೆ. ಏನೇ ತಾಂತ್ರಿಕ ಲೋಪದೋಷಗಳಿದ್ದರೂ ಸರಿಪಡಿಸಿ ಸರ್ಕಾರ ಈಗಲಾದರೂ ನಮ್ಮ ಮನವಿಗೆ ಸ್ಪಂದಿಸಿ ಗೌರವಧನ ನೀಡಬೇಕು. ಎಸ್.ಜಿ.ನಾಗರತ್ನ ಜಂಟಿ ಕಾರ್ಯದರ್ಶಿ ಸರ್ಕಾರಿ ಪದವಿರ್ಪೂ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ 324 ಅತಿಥಿ ಉಪನ್ಯಾಸಕರಿದ್ದು ನಿರ್ದಿಷ್ಟ ಖಾಲಿ ಇರುವು ಹುದ್ದೆಗಳಿಗೆ ನೇಮಿಸಿಕೊಂಡಿರುವ 205 ಉಪನ್ಯಾಸಕರಿಗೆ ಮಾತ್ರ ಗೌರವಧನ ನೀಡಬಹುದಾಗಿದೆ. ಹೆಚ್ಚುವರಿ ಉಪನ್ಯಾಸಕರಿಗೆ ತಡೆ ಹಿಡಿಯಲಾಗಿದ್ದು ಈ ಗೊಂದಲ ಬಗೆಹರಿಸುವ ಸರ್ಕಾರಕ್ಕೆ ಮನವಿ ಕೂಡ ಮಾಡಿಲಾಗಿದೆ. ಸರ್ಕಾರ ಅನುದಾನ ನೀಡಿದ್ದೇ ಆದಲ್ಲಿ ಎಲ್ಲರಿಗೂ ಗೌರವ ಧನ ನೀಡಲಾಗುವುದು. ಗಂಗಾಧರ್ ಉಪನಿರ್ದೇಶಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹೋರಾಟ ಅನಿವಾರ್ಯ ಕಳೆದ ಐದು ತಿಂಗಳನಿಂದ ಗೌರವ ಧನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಜೀವನ ಸಾಗಿಸುವುದೇ ಕಷ್ಟ ಎನಿಸುರವ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರು ಈಗ ಹೋರಾಟದ ಹಾದಿ ತುಳಿದಿದ್ದಾರೆ. ಮೊದಲ ಹಂತವಾಗಿ ಮಂಗಳವಾರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್‌ರನ್ನು ಭೇಟಿ ಮಾಡಿ ಗೌರವಧನ ಬಿಡುಗಡೆ ಮಾಡುವಂತೆ ಹಾಗೂ ಹೆಚ್ಚುವರಿ ಉಪನ್ಯಾಸಕರ ಗೊಂದಲ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘಟನೆಯ ಜಂಟಿ ಕಾರ್ಯದರ್ಶಿ ಎಸ್.ಜಿ.ನಾಗರತ್ನ ಎಚ್ಚರಿಕೆ ನೀಡಿದ್ದಾರೆ.